×
Ad

ಮಲ್ಪೆ ಅಭಿವೃದ್ಧಿ ಸಮಿತಿ ರದ್ಧತಿಗೆ ನಗರಸಭೆಯಲ್ಲಿ ನಿರ್ಣಯ; ಬೀಚ್‌ನಲ್ಲಿ ಅಕ್ರಮ ಕಟ್ಟಡ ನಿರ್ಮಾಣ, ಹಣ ಲೂಟಿ: ಆರೋಪ

Update: 2021-08-25 20:00 IST

ಉಡುಪಿ, ಆ.25: ಅಭಿವೃದ್ಧಿ ಹೆಸರಿನಲ್ಲಿ ಹಣ ಲೂಟಿ ಹಾಗೂ ಕಾನೂನು ಉಲ್ಲಂಘನೆ ಮಾಡುತ್ತಿರುವ ಕುರಿತ ಸದಸ್ಯರ ಆರೋಪದ ಹಿನ್ನೆಲೆಯಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿಯನ್ನು ರದ್ದುಗೊಳಿಸುವ ನಿರ್ಣಯವನ್ನು ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೆಗೆದು ಕೊಳ್ಳಲಾಯಿತು.

ಬುಧವಾರ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಗರಸಭೆ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಮಲ್ಪೆಯಲ್ಲಿ ಶಾಶ್ವತ ಕಾಮಗಾರಿ ನಡೆಸಲು ಅವಕಾಶ ಇಲ್ಲದಿದ್ದರೂ ಮಲ್ಪೆ ಅಭಿವೃದ್ಧಿ ಸಮಿತಿಯು ಕಾನೂನು ಉಲ್ಲಂಘಿಸಿ ರೆಸ್ಟೋರೆಂಟ್‌ಗೆ ಕಾಮಗಾರಿ ನಡೆಸುತ್ತಿದೆ. ಇಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಗುತ್ತಿಗೆ ದಾರರು ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಯೋಗೀಶ್ ಸಾಲಿಯಾನ್, ತಾತ್ಕಾಲಿಕ ಕಟ್ಟಡದ ಹೆಸರಿನಲ್ಲಿ ಅನುಮತಿ ಪಡೆದು ಶಾಶ್ವತ ಕಾಮಗಾರಿ ನಡೆಸ ಲಾಗುತ್ತಿದೆ. ಮಲ್ಪೆ ಬೀಚ್‌ನಲ್ಲಿ ಯಾವುದೇ ಜೀವಹಾನಿ ಸಂಭವಿಸಿದರೂ ಸಮಿತಿಯೇ ಜವಾಬ್ದಾರಿ ಎಂಬುದನ್ನು ಟೆಂಡರ್ ಷರತ್ತಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕಳೆದ 5 ವರ್ಷದಲ್ಲಿ ಒಟ್ಟು 16 ಮಂದಿ ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಯಾವುದೇ ಯಾವ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪೌರಾಯುಕ್ತ ಉದಯ ಶೆಟ್ಟಿ, ಬೀಚ್‌ನಲ್ಲಿ ತಾತ್ಕಾ ಲಿಕ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಕೊಟ್ಟಿದ್ದೇವೆ. ಅದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾದರೂ ಕ್ರಮ ಜರಗಿಸಲಾಗುವುದು ಎಂದರು. ನಗರ ಸಭೆ ಇರುವಾಗ ಪ್ರತ್ಯೇಕ ಮಲ್ಪೆ ಅಭಿವೃದ್ಧಿ ಸಮಿತಿ ಬೇಕಾಗಿಲ್ಲ. ಜನರ ಹಣ ಲೂಟಿ ಮಾಡುವ ಸಮಿತಿಯನ್ನು ರದ್ದುಗೊಳಿಸಬೇಕು ಎಂದು ಸಭೆಯಲ್ಲಿ ಸರ್ವಾನುಮತದ ಒತ್ತಾಯಗಳು ಕೇಳಿಬಂದವು. ಈ ಬಗ್ಗೆ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಬೀದಿ ದೀಪಗಳ ಕಳವು: ಉಡುಪಿ ನಗರಸಭೆ ವ್ಯಾಪ್ತಿಯ ಶೀಂಬ್ರಾ ಸೇರಿದಂತೆ ವಿವಿಧ ಕಡೆಗಳಲ್ಲಿ ಹೊಸದಾಗಿ ಆಳವಡಿಸಲಾದ ಎಲ್‌ಇಡಿ ಬೀದಿ ದೀಪಗಳು ಕಳವು ಆಗುತ್ತಿರುವ ಬಗ್ಗೆ ಸದಸ್ಯರಾದ ಎಡ್ಲಿನ್ ಕರ್ಕಡ, ಜಯಂತಿ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ಶಾಸಕ ಕೆ.ರಘಪತಿ ಭಟ್ ಸೂಚಿಸಿದರು.

ಕರಾವಳಿ ಬೈಪಾಸ್‌ನಿಂದ ಮಲ್ಪೆವರೆಗಿನ ರಾಷ್ಟ್ರೀಯ ಹೆದ್ದಾರಿ 169(ಎ)ರ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು, ಪ್ರತಿನಿತ್ಯ ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ಶೀಘ್ರವೇ ಹೊಂಡಗಳನ್ನು ಮುಚ್ಚಲು ಕ್ರಮ ತೆಗೆದು ಕೊಳ್ಳುವಂತೆ ಸದಸ್ಯರಾದ ಸವೀತಾ ಹರೀಶ್‌ರಾಮ್ ಹಾಗೂ ಸುಂದರ್ ಜೆ. ಕಲ್ಮಾಡಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಶಾಸಕರು, ಈ ಬಗ್ಗೆ ಹೆದ್ದಾರಿ ಇಲಾಖೆ ಗಮನಕ್ಕೆ ತಂದು ಶೀಘ್ರವೇ ಹೊಂಡ ಮುಚ್ಚಿಸಲಾಗುವುದು ಎಂದರು.

ನಗರಸಭೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ನಗರಸಭೆಯಿಂದ ನೀಡುವ ಆರೋಗ್ಯ ಕಾರ್ಡ್ ಯೋಜನೆಗೆ ಈವರೆಗೆ 1000 ಮಂದಿಯನ್ನು ಮಾತ್ರ ಗುರುತಿಸಲಾಗಿದೆ. ಕಳೆದ ವರ್ಷ 2500 ಫಲಾನುಭವಿ ಗಳಲ್ಲಿ ಬಹುತೇಕ ಮಂದಿಯನ್ನು ಆದಾಯದ ಕಾರಣಕ್ಕೆ ಕೈಬಿಡಲಾಗಿದೆ ಎಂದು ಅಧಿ ಕಾರಿಗಳು ಮಾಹಿತಿ ನೀಡಿದರು.

ಈ ಸಂಬಂಧ ಆದಾಯ ಮಿತಿಯನ್ನು ತೆಗೆದು ಹಾಕಬೇಕು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಬಿಟ್ಟು ಉಳಿದ ಎಲ್ಲರನ್ನು ಈ ಯೋಜನೆ ವ್ಯಾಪ್ತಿಗೆ ತರಬೇಕು. ಆದುದರಿಂದ ಈ ವರ್ಷ ಕೈಬಿಟ್ಟವರನ್ನು ಮತ್ತೆ ಸೇರಿಸುವ ಕಾರ್ಯ ವನ್ನು ಆಯಾ ವಾರ್ಡಿನ ಸದಸ್ಯರು ಮಾಡುವಂತೆ ರಘುಪತಿ ಭಟ್ ಸಭೆಗೆ ಸಲಹೆ ನೀಡಿದರು.

ನಗರದ ವ್ಯಾಪ್ತಿಯಲ್ಲಿ ಹಣ್ಣು, ತರಕಾರಿಗಳಿಗೆ ರಾಸಾಯನಿಕ ಮಿಶ್ರಣ ಮಾಡುವ ದಲ್ಲಾಳಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ಸಭೆಯನ್ನು ಮತ್ತೊಮ್ಮೆ ಕರೆಯಬೇಕು ಎಂದು ಸದಸ್ಯ ವಿಜಯ ಕೊಡವೂರು ಒತ್ತಾಯಿಸಿದರು.

ಆಸ್ಪತ್ರೆ ಗುಂಡಿ ಮುಚ್ಚಲು 82ಲಕ್ಷ ರೂ.!

ಬಿ.ಆರ್.ಶೆಟ್ಟಿ ಗ್ರೂಪ್ ನಗರಸಭೆ ಕಚೇರಿ ಎದುರು ಮಲ್ಪಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲು ತೋಡಿರುವ ಗುಂಡಿ ಮುಚ್ಚಲು ತೆಗೆದುಕೊಂಡಿರುವ ಕ್ರಮದ ಬಗ್ಗೆ ಗಿರೀಶ್ ಅಂಚನ್ ಸಭೆಯಲ್ಲಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಎಎಇ ಮೋಹನ್ ರಾಜ್, 85 ಮೀಟರ್ ಅಗಲ, 55 ಮೀಟರ್ ಉದ್ದ, 10 ಮೀಟರ್ ಆಳ ಆಳವಿದೆ. ಇದನ್ನು ಮುಚ್ಚಲು 5,525 ಲೋಡ್ ಮಣ್ಣಿನ ಅಗತ್ಯವಿದೆ. ಒಂದು ಲೋಡ್‌ಗೆ 1,500ರೂ. ನಂತೆ ಒಟ್ಟು 82.50 ಲಕ್ಷ ರೂ. ಬೇಕಾಗಿದೆ. ಅದೇ ರೀತಿ ಈ ಸಂಬಂಧ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News