ಶಿವಮೊಗ್ಗ ಮೂಲದ ಬಾಲಕಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ವೃದ್ಧನ ಬಂಧನ
ಮಂಗಳೂರು, ಆ.25: ಎಂಟು ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ವೃದ್ಧನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕಟೀಲು ಪೆರ್ಮುದೆಯ ರಾಮಕೃಷ್ಣ ಬಂಧಿತ ಆರೋಪಿ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ವಿವರ: ಶಿವಮೊಗ್ಗ ಮೂಲದ ಮಹಿಳೆಯು ಕಟೀಲು ಪೆರ್ಮುದೆಯ ರಾಮಕೃಷ್ಣ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಇವರು ಮೂಲತಃ ಶಿವಮೊಗ್ಗದವರು ಎನ್ನಲಾಗಿದೆ. ಆ.21ಕ್ಕೆ ಬಾಲಕಿಯ ತಾಯಿ ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಪ್ರಯಾಣಿಸಿದ್ದಾರೆ. ಆಗ ತನ್ನ ಮೂವರು ಮಕ್ಕಳನ್ನು ಪೆರ್ಮುದೆಯ ಬಾಡಿಗೆ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳೆಯ ಮೂವರು ಮಕ್ಕಳು ಅದೇ ದಿನ ಸಂಜೆ ವೇಳೆ ಆರೋಪಿಯ ಮನೆಗೆ ಟಿ.ವಿ. ನೋಡಲು ಹೋಗಿದ್ದಾರೆ. ಆರೋಪಿಯ ಪತ್ನಿ ಕಟ್ಟಿಗೆ ತರಲು ಈಕೆಯ ಇಬ್ಬರು ಮಕ್ಕಳನ್ನು ಕರೆದೊಯ್ದಿದ್ದು, ಇನ್ನೋರ್ವ ಪುತ್ರಿಯಾದ ಎಂಟು ವರ್ಷ ಬಾಲಕಿ ಮನೆಯಲ್ಲೇ ಉಳಿದು, ಟಿ.ವಿ. ನೋಡುತ್ತಿದ್ದಳು. ಈ ವೇಳೆ ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಮರುದಿನವೂ ಇದೇ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ತಾಯಿ ಪೆರ್ಮುದೆಗೆ ವಾಪಸಾದಾಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.