ಜ್ಞಾನ ರಹಿತ ನಡೆ, ಕಾರ್ಯ ವ್ಯರ್ಥಕ್ಕೆ ಸಮ : ಸುಶಾಂತ್ ಸುಧಾಕರ್
ಕಾರ್ಕಳ: ನಾಯಕತ್ವ ಒಂದು ಸ್ಥಾನಮಾನವಲ್ಲ ಅದೊಂದು ಕಾರ್ಯ. ಜ್ಞಾನರಹಿತ ಕಾರ್ಯ ಅಥವಾ ನಡೆ ವ್ಯರ್ಥಕ್ಕೆ ಸಮ. ದೇಶದ ಸೈನ್ಯದ ಮೇಲೆ ನಮಗೆ ವಿಶ್ವಾಸವಿದೆ, ಹಾಗಾಗಿ ತಾಲಿಬಾನ್ ನಂತಹ ಉಗ್ರರ ಬಗ್ಗೆ ನಮಗೆ ಯಾವುದೇ ಭಯವಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಾದ ಸುನೀಲ್ ಕುಮಾರ್ ಅವರು ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ನೋಡಿದಾಗ ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವ ತೆಗೆದುಕೊಳ್ಳದೆ ಕಾಂಗ್ರೆಸ್ ತೆಗೆದುಕೊಂಡಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಅಂತ ಹೇಳಿರುವುದು ಖಂಡನೀಯ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಸುಶಾಂತ್ ಸುಧಾಕರ್ ಹೇಳಿದರು.
ವ್ಯಕ್ತಿಪೂಜೆ ಮಾಡಿ ದೇಶದ ಸೈನಿಕರ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಮತ್ತು ಖಂಡನಾರ್ಹ. ಇದು ಬಿಜೆಪಿಯವರ ನೈತಿಕ ಪ್ರಜ್ಞೆಯನ್ನು ತೋರಿಸುತ್ತದೆ ಮತ್ತು ಕಳೆದ 74 ವರ್ಷದ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಸೈನಿಕರ ಮೇಲೆ ದೇಶದ ಗಡಿರೇಖೆಯೊಳಗೆ ಬಂದು ಉಗ್ರರಿಂದ ಭಾರೀ ಪ್ರಮಾಣದ ಬಾಂಬ್ ದಾಳಿಯಾಗಲಿಲ್ಲ. ಈ ದಾಳಿಯಾದದ್ದು ನರೇಂದ್ರ ಮೋದಿಯವರ ನೇತೃತ್ವದ ಆಡಳಿತ ಇರುವಾಗ, ಪುಲ್ವಾಮಾದಲ್ಲಿ ಏನು ನಡೆದಿದೆ ಎಂಬುದು ದೇಶದ ಜನರಿಗೆ ತಿಳಿದ ವಿಷಯ. ಸುಮಾರು 12 ಲಕ್ಷಕ್ಕಿಂತಲೂ ಜಾಸ್ತಿ ಸೈನಿಕರು ಮತ್ತು 9 ಲಕ್ಷಕ್ಕಿಂತಲೂ ಹೆಚ್ಚು ಮೀಸಲು ಸೈನಿಕರಿರುವ ಬಲಿಷ್ಠ ಸೇನೆಯೆಂದರೆ ನಮ್ಮ ಭಾರತದ ಸೇನೆ ಅಂತ ಸೇನೆಯ ರಕ್ಷಣೆಯಲ್ಲಿ ನಾವಿದ್ದೇವೆ. ಅಂತ ಬಲಿಷ್ಠ ಸೇನೆಯನ್ನು ಕಟ್ಟಿದ್ದು ಕಾಂಗ್ರೆಸ್ ಸರಕಾರ. 1958 ರಲ್ಲೇ ನೆಹರೂರವರು (D.R.D.O) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಸೇನಾ ಸಂಶೋಧನೆಗಳಿಗೆ ಅನು ಮಾಡಿಕೊಟ್ಟು ನಮ್ಮ ದೇಶ ಬಲಿಷ್ಠ ಸೈನ್ಯವಾಗುವಂತೆ ತಳಪಾಯ ಹಾಕಿದವರು. ಇನ್ನಾದರೂ ಬಿಜೆಪಿ ಮತ್ತು ಸಂಘಪರಿವಾರದವರು ಇಟಲಿಯ "ಫ್ಯಾಸಿಸ್ಟ್" ಮತ್ತು ಜರ್ಮನಿ "ನಾಜಿಸ್ಟ್" ಮಾದರಿಯ ವ್ಯಕ್ತಿಪೂಜೆಯನ್ನು ಬಿಟ್ಟು ನೈಜ ದೇಶಸೇವೆಯಲ್ಲಿ ತೊಡಗಬೇಕು. ಜನಾಶೀರ್ವಾದ ಜನವಿರೋಧಿ ಸರಕಾರಕ್ಕೆ ಇದೆಯೋ ಅಥವಾ ಜನರ ಕಷ್ಟನಷ್ಟಗಳಿಗೆ ಸ್ಪಂದಿಸಿ ರೈತರ, ಕೂಲಿಕಾರ್ಮಿಕರ, ಶ್ರೀಸಾಮಾನ್ಯರ ಪರವಾಗಿ ಇರುವವರಿಗೆ ಇದೆಯೋ ಎಂಬುದು ಮುಂಬರುವ ದಿನಗಳಲ್ಲಿ ತೀರ್ಮಾನವಾಗಲಿದೆ ಎಂದರು.