×
Ad

'ಸಂಸ್ಕೃತ ಭಾರತೀಯ ಕಾರ್ಕಳ ಘಟಕ' ಉದ್ಘಾಟನೆ: ಅಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್‌

Update: 2021-08-25 21:50 IST

ಕಾರ್ಕಳ : ಅತ್ಯಪರೂಪದ ಭಾಷಾ ಸಂಪತ್ತು, ಶುದ್ಧ ವ್ಯಾಕರಣ, ಸಾಹಿತ್ಯ, ಪುರಾಣ, ನೀತಿಸೂಕ್ತ, ಸುಭಾಷಿತ, ವಿಜ್ಞಾನ, ರಾಜ ನೀತಿಗಳನ್ನೊಳಗೊಂಡ ಸಂಸ್ಕೃತ ಭಾಷೆಯು ಜಗತ್ತಿನ ಉಳಿದೆಲ್ಲಾ ಭಾಷೆಗಳಿಗೆ ತಾಯಿಯ ಸ್ಥಾನದಲ್ಲಿದೆ. ಪ್ರತಿಯೊಬ್ಬ ಭಾರತೀಯನೂ ಸಂಸ್ಕೃತ ಕಲಿಕೆಗೆ ಮುಂದಾಗಬೇಕು. ಅಪೂರ್ವ ಜ್ಞಾನನಿಧಿ ದೇವವಾಣಿಯ ಅಧ್ಯಯನದಿಂದ ಭಾರತವು ತನ್ನ ಸಾಂಸ್ಕೃತಿಕ ಉತ್ಕೃಷ್ಟ ದಿನಗಳತ್ತ ಹೊರಳಲಿದೆ. ಭಾಷಾ ಸಾಮರಸ್ಯ ಹಾಗೂ ರಾಷ್ಟ್ರೀಯ ಏಕತೆಯ ಸಾಧನೆಗೆ ಸಂಸ್ಕೃತವೊಂದೇ ಪರಿಹಾರ ಎಂದು ಸಂಸ್ಕೃತ ಭಾರತಿಯ ಉಡುಪಿ ಜಿಲ್ಲಾಧ್ಯಕ್ಷ ಪಿ. ಶ್ರೀಧರ ಆಚಾರ್ ಹೇಳಿದರು. 

ಅವರು ಶ್ರೀಮದ್ಭುವನೇಂದ್ರ ಪ್ರೌಢಶಾಲೆಯಲ್ಲಿ ನಡೆದ ಸಂಸ್ಕೃತ ಭಾರತಿಯ ಕಾರ್ಕಳ ಘಟಕದ ಉದ್ಘಾಟನೆ ಹಾಗೂ ಸಂಸ್ಕೃತೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಷ್ಟೀಯ ಸ್ವಯಂಸೇವಕ ಸಂಘದ ತಾಲೂಕು ಸಂಘಚಾಲಕ ಉದಯ ಕುಮಾರ್ ಶೆಣೈ‌, ವಿದೇಶದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕೃತದ ಮೂಲಕ ಜೀವನ ಶಿಕ್ಷಣ ಕಲಿಸಲು ಹಾತೊರೆಯುತ್ತಿದ್ದರೆ. ಪ್ರತಿ ವಿದ್ಯಾಸಂಸ್ಥೆಯಲ್ಲೂ ಸಂಸ್ಕೃತದ ಕಲಿಕೆಗೆ ಅವಕಾಶ ಲಭ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.

ನಿಟ್ಟೆ ಗಾಜ್ರಿಯಾ ವೈದ್ಯಕೀಯ ಸಂಸ್ಥೆಯ ಡಾ. ಕಾರ್ತಿಕ್ ರಾವ್ ಮಾತನಾಡಿ, ಆಧುನಿಕ ಕಾಲಘಟ್ಟದ ಅನೇಕ ಕ್ಲಿಷ್ಟಕರ ಪ್ರಶ್ನೆಗಳಿಗೆ ಹಾಗೂ ಒತ್ತಡಮಯ ಬದುಕಿನ ನಿವಾರಣೆಗೆ ವೇದೋಪನಿಷತ್ತುಗಳಲ್ಲಿ ಉತ್ತರ ಲಭ್ಯವಿದೆ ಎಂದರು. ನೂತನ ಸಮಿತಿಯ ಅಧ್ಯಕ್ಷರಾಗಿ ಕೆ. ಗೋಪಾಲಕೃಷ್ಣ ಭಟ್, ಉಪಾಧ್ಯಕ್ಷರಾಗಿ ಡಾ. ಕಾರ್ತಿಕ್ ರಾವ್, ಸಂಯೋಜಕರಾಗಿ ಡಾ. ಸುಮಂತ್ ಜೋಶಿ, ಸಹ ಸಂಯೋಜಕರಾಗಿ ಪೂರ್ಣಿಮಾ ಶೆಣೈ, ಕೋಶ ಪ್ರಮುಖರಾಗಿ  ಗಜಾನನ ಮರಾಠೆ, ಶಿಕ್ಷಣ ಪ್ರಮುಖರಾಗಿ ಡಾ. ಪದ್ಮನಾಭ ಮರಾಠೆ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಆರ್. ಸುರೇಂದ್ರ ಶೆಣೈ, ನಿವೃತ್ತ ಎವಿಎಂ ರಮೇಶ ಕಾರ್ಣಿಕ್ ಅವರನ್ನು ಆಯ್ಕೆ ಮಾಡಲಾಯಿತು.  ಶೈಲಜಾ  ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಶೆಣೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News