ಪೊಲೀಸ್ ಭದ್ರತೆಯಲ್ಲಿ ವಿವಾದಾತ್ಮಕ ಪವಿತ್ರಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಯೆಹೂದಿಗಳು
ಜೆರುಸಲೇಂ, ಆ.25: ಜೆರುಸಲೇಂನಲ್ಲಿರುವ ವಿವಾದಾತ್ಮಕ ಪವಿತ್ರಸ್ಥಳದಲ್ಲಿ ಇಸ್ರೇಲ್‌ನ ಬಿಗು ಪೊಲೀಸ್ ಭದ್ರತೆಯೊಂದಿಗೆ ಯೆಹೂದಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಜೆರುಸಲೇಂನ ಬೆಟ್ಟದ ಮೇಲಿನ ಈ ಸ್ಥಳವನ್ನು ಶ್ರೇಷ್ಠ ಪವಿತ್ರಸ್ಥಳ ಎಂದು ಮುಸ್ಲಿಮರು ಹೆಸರಿಸುತ್ತಿದ್ದರೆ ಯೆಹೂದಿಗಳು ಟೆಂಪಲ್ ವೌಂಟ್ ಎಂದು ಕರೆಯುತ್ತಿದ್ದಾರೆ. ಇಲ್ಲಿ ಇಸ್ಲಾಮ್‌ನಲ್ಲಿ ಮೂರನೇ ಅತ್ಯಂತ ಪವಿತ್ರ ಸ್ಥಳವಾಗಿರುವ ಅಲ್‌ಅಖ್ಸಾ ಮಸೀದಿಯೂ ಇದೆ.
ಇಲ್ಲಿ ನಡೆದಿರುವುದು ಯಥಾಸ್ಥಿತಿಯ ಅಪಾಯಕಾರಿ ಉಲ್ಲಂಘನೆಯಾಗಿದೆ. ತೀವ್ರವಾದಿಗಳಿಗೆ ರಕ್ಷಣೆ ಒದಗಿಸುವುದನ್ನು ಇಸ್ರೇಲ್ ಪೊಲೀಸರು ನಿಲ್ಲಿಸಬೇಕು ಎಂದು ಈ ಪವಿತ್ರಸ್ಥಳದ ಆಡಳಿತ ನಿರ್ವಹಿಸುವ , ಜೋರ್ಡನ್ ಬೆಂಬಲಿತ ಇಸ್ಲಾಮಿಕ್ ಟ್ರಸ್ಟ್‌ನ ಉನ್ನತ ಅಧಿಕಾರಿ ಶೇಖ್ ಉಮರ್ ಅಲ್‌ಕಿಸ್ವಾನಿ ಆಗ್ರಹಿಸಿದ್ದಾರೆ.
ಇಲ್ಲಿರುವ ಪವಿತ್ರಸ್ಥಳ ಇಸ್ರೇಲ್-ಫೆಲೆಸ್ತೀನ್ ನಡುವಿನ ಸಂಘರ್ಷದ ಭಾವನಾತ್ಮಕ ಅಧ್ಯಾಯವಾಗಿದ್ದು ಪವಿತ್ರಸ್ಥಳದ ಹಕ್ಕು ಸಾಧನೆಗಾಗಿ ಹಲವಾರು ಮಾರಣಾಂತಿಕ ಹೋರಾಟ ನಡೆದಿದೆ, ನಡೆಯುತ್ತಿದೆ. ಇತ್ತೀಚೆಗೆ, ಮೇ ತಿಂಗಳಿನಲ್ಲಿ ಇಲ್ಲಿರುವ ಮಸೀದಿಯ ಒಳಗಿಂದ ಫೆಲೆಸ್ತೀನ್ ಪ್ರತಿಭಟನಾಕಾರರು ಇಸ್ರೇಲ್ ಸೇನೆಯತ್ತ ಕಲ್ಲೆಸೆತ ನಡೆಸಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ವೈಮಾನಿಕ ಕಾರ್ಯಾಚರಣೆ ನಡೆಸಿತ್ತು ಮತ್ತು ಇದು ಇಸ್ರೇಲ್- ಹಮಾಸ್(ಗಾಝಾ ಪಟ್ಟಿಯಲ್ಲಿ ಆಡಳಿತ ನಡೆಸುವ ಪೆಲೆಸ್ತೀನಿಯರ ಸಂಘಟನೆ) ಡುವಿನ ಯುದ್ಧಕ್ಕೆ ಕಾರಣವಾಗಿತ್ತು.
1967ರ ಮಧ್ಯಪ್ರಾಚ್ಯ ಯುದ್ಧದ ಸಂದರ್ಭ ಪೂರ್ವಜೆರುಸಲೇಂನ ಪ್ರದೇಶದ ಸಹಿತ ಈ ಪವಿತ್ರಸ್ಥಳವಿದ್ದ ಬೆಟ್ಟವನ್ನು ಇಸ್ರೇಲ್ ವಶಪಡಿಸಿಕೊಂಡು ಬಳಿಕ ಅದನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿತ್ತು. ಆದರೆ ಇಸ್ರೇಲ್‌ನ ಈ ಉಪಕ್ರಮಕ್ಕೆ ಬಹುತೇಕ ಅಂತರ್ ರಾಷ್ಟ್ರೀಯ ಸಮುದಾಯ ಮಾನ್ಯತೆ ನೀಡಿಲ್ಲ. 1967ರಿಂದ ‘ಯಥಾಸ್ಥಿತಿ’ ಎಂದು ಕರೆಯಲಾಗುವ ಶಿಥಿಲ ನಿಯಮಗಳ ಅಡಿಯಲ್ಲಿ ಈ ಪವಿತ್ರಸ್ಥಳದ ದೈನಂದಿನ ನಿರ್ವಹಣೆ ಮುಂದುವರಿಯುತ್ತಿದೆ. ಈ ಯಥಾಸ್ಥಿತಿಯಲ್ಲಿ ಬದಲಾವಣೆ ತರುವ ಯಾವುದೇ ವಾಸ್ತವಿಕ ಅಥವಾ ನಿರೀಕ್ಷಿತ ಪ್ರಯತ್ನಗಳು ಹಿಂಸೆಗೆ ್ರಚೋದನೆ ನೀಡುವ ಸಾಧ್ಯತೆಯಿದೆ.