ಭಾರತಕ್ಕೆ ಪ್ರಯಾಣಿಸಲು ಅಫ್ಘಾನ್ ಪ್ರಜೆಗಳಿಗೆ ಇ-ವೀಸಾ ಅಗತ್ಯ: ಗೃಹ ಸಚಿವಾಲಯ
ಕಾಬೂಲ್, ಆ.25: ಅಫ್ಘಾನಿಸ್ತಾನದ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆ ಯಲ್ಲಿ, ಅಫ್ಘಾನ್ ಪ್ರಜೆಗಳಿಗೆ ಆ ದೇಶದಿಂದ ಭಾರತಕ್ಕೆ ಆಗಮಿಸಲು ಈ ಮೊದಲು ನೀಡಿದ್ದ ವೀಸಾಗಳು ಸಿಂಧುತ್ವವನ್ನು ಹೊಂದಿರುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ತಿಳಿಸಿದೆ. ಹೀಗಾಗಿ ಎಲ್ಲಾ ಅಫ್ಘಾನ್ ಪ್ರಜೆಗಳು ಭಾರತಕ್ಕೆ ಇ-ವೀಸಾ ಮೂಲಕವೇ ಪ್ರಯಾಣಿಸಬೇಕೆಂದು ಅವರು ತಿಳಿಸಿದ್ದಾರೆ.
ಕೆಲವು ನಿರ್ದಿಷ್ಟ ಅಫ್ಘಾನ್ ಪ್ರಜೆಗಳ ಪಾಸ್‌ಪೋರ್ಟ್‌ಗಳು ಕೈತಪ್ಪಿಹೋಗಿವೆ ಹೀಗಾಗಿ ಪ್ರಸಕ್ತ ಭಾರತದಲ್ಲಿ ವಾಸವಾಗಿರದ ಎಲ್ಲಾ ಅಫ್ಘಾನ್ ಪ್ರಜೆಗಳಿಗೆ ಈ ಮೊದಲು ನೀಡಲಾಗಿದ್ದ ವೀಸಾಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಸಿಂಧುಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಫ್ಘಾನ್ ಪ್ರಜೆಗಳಿಗೆ ‘ಇ-ಎಮರ್ಜೆನ್ಸಿ ಎಕ್ಸ್-ಮಿಸಲೆನಿಯಸ್ ವೀಸಾ’ವನ್ನು ಪರಿಚಯಿಸುವ ಮೂಲಕ ವೀಸಾ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲಾಗುತ್ತದೆ ಎಂದು ಸಚಿವಾಲಯವು ತಿಳಿಸಿದೆ. ಇನ್ನು ಮುಂದೆ ಎಲ್ಲಾ ಅಫ್ಘಾನ್ ಪ್ರಜೆಗಳು ಕೇವಲ ಇ-ವೀಸಾ ಮೂಲಕವೇ ಭಾರತಕ್ಕೆ ಪ್ರಯಾಣಿಸಬಹುದಾಗಿದೆ ಮತ್ತು ಅದಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅದು ಹೇಳಿದೆ.
ಭದ್ರತಾ ಆತಂಕಗಳನ್ನು ಗಮನದಲ್ಲಿರಿಸಿಕೊಂಡು ನೂತನ ಶ್ರೇಣಿಯ ವೀಸಾಗಳನ್ನು ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಆರಂಭದಲ್ಲಿ ಆರು ತಿಂಗಳಿನ ವೀಸಾವನ್ನು ಈ ಶ್ರೇಣಿಯಡಿ ನೀಡಲಾಗಿದೆಯೆಂದು ಗೃಹ ಸಚಿವಾಲಯ ತಿಳಿಸಿದೆ.