'ವೀಡಿಯೋ ಬಿಡುಗಡೆಗೊಳಿಸಿ' ಎಂದು ಅಣ್ಣಾಮಲೈ ಹೇಳುತ್ತಿರುವ ಆಡಿಯೋ ಬಿಡುಗಡೆಗೊಳಿಸಿದ ಉಚ್ಛಾಟಿತ ಬಿಜೆಪಿ ಸದಸ್ಯ

Update: 2021-08-27 05:51 GMT
ಅಣ್ಣಾಮಲೈ (File Photo: PTI)

ಚೆನ್ನೈ: ತಮಿಳುನಾಡು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ ಟಿ ರಾಘವನ್ ಅವರದ್ದೆಂದು ಹೇಳಲಾದ ಅಶ್ಲೀಲ ವೀಡಿಯೋ ಕಾಲ್ ಒಂದನ್ನು ಬಿಡುಗಡೆಗೊಳಿಸಿ ರಾಘವನ್ ಅವರ ರಾಜೀನಾಮೆಗೆ ಕಾರಣರಾದ ಹಾಗೂ ನಂತರ ಪಕ್ಷದಿಂದ ಉಚ್ಛಾಟನೆಗೊಂಡ ಮದನ್ ರವಿಚಂದ್ರನ್ ಅವರು ತಮ್ಮ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರ ನಡುವೆ ನಡೆದಿದೆಯೆನ್ನಲಾದ ಸಂಭಾಷಣೆಯೊಂದರ ಆಡಿಯೋ ಟೇಪ್ ಬಿಡುಗಡೆಗೊಳಿಸಿದ್ದಾರೆ.

ಒಂದು ಆಡಿಯೋ ಕ್ಲಿಪ್‍ನಲ್ಲಿ ಅಣ್ಣಾಮಲೈ ಅವರದ್ದೆಂದು ಹೇಳಲಾದ ಧ್ವನಿಯೊಂದು ಮದನ್ ಹಾಗೂ ಅವರ ಸಹವರ್ತಿ ವೆನ್ಬಾ ತಮ್ಮ ಬಳಿ ಇದೆಯೆಂದು ಹೇಳಿರುವ ಹಲವು ಬಿಜೆಪಿ ನಾಯಕರ ಅಶ್ಲೀಲ ವೀಡಿಯೋ ಟೇಪ್‍ಗಳ ಕುರಿತಂತೆ ಉಲ್ಲೇಖಿಸಿ ಅವುಗಳನ್ನು "ಬಿಡುಗಡೆಗೊಳಿಸಿ'' ಎಂದು ಹೇಳುತ್ತಿರುವುದು ಕೇಳಿಸುತ್ತದೆ. "ನೀವು ಅವುಗಳನ್ನು ನಾಳೆ ಬೆಳಿಗ್ಗೆ ಬಿಡುಗಡೆಗೊಳಿಸಿದರೆ ನಾನು ಅವರನ್ನು ಉಚ್ಛಾಟಿಸಬೇಕು, ನೀವು ಬಿಡುಗಡೆಗೊಳಿಸದೇ ಇದ್ದರೆ ಅದು ನನಗೆ ದೊಡ್ಡ ತಲೆನೋವಾಗುತ್ತದೆ. ಅವುಗಳನ್ನು ಜನರಿಗೆ ತೋರಿಸಬೇಕು, ಕ್ರಮ ಕೈಗೊಳ್ಳಬೇಕು,'' ಎಂದು ಅವರು ಹೇಳುತ್ತಿರುವುದು ಕೇಳಿಸುತ್ತದೆ.

ತಮಗೂ ಒಬ್ಬಳು ಪುತ್ರಿಯಿದ್ದಾಳೆ ಹಾಗೂ ತಮಗೆ ಮಹಿಳೆಯರ ಸುರಕ್ಷತೆಯ ಬಗ್ಗೆ ಕಾಳಜಿಯಿದೆ ಎಂದು ಫೇಸ್‍ಬುಕ್‍ನಲ್ಲಿ ಬಿಡುಗಡೆಗೊಳಿಸಲಾಗಿರುವ ಆಡಿಯೋ ಟೇಪ್‍ನಲ್ಲಿ ಅಣ್ಣಾಮಲೈ ಹೇಳುತ್ತಿರುವುದು ಕೇಳಿಸುತ್ತದೆ ಎಂದು thehindu.com ವರದಿ ಮಾಡಿದೆ.

ಎರಡು ಬಾರಿ ಕೇಳಿದ್ದರೂ ಮದನ್ ಅವರು ತಮಗೆ ವೀಡಿಯೋ ನೀಡಿರಲಿಲ್ಲ ಎಂದು ಅಣ್ಣಾಮಲೈ ಈ ಹಿಂದೆ ಹೇಳಿದ್ದರು.

ಬುಧವಾರ ಪಕ್ಷವು ಮದನ್ ರವಿಚಂದ್ರನ್ ಹಾಗೂ ವೆನ್ಬಾ ಅವರನ್ನು ಉಚ್ಛಾಟಿಸಿತ್ತಲ್ಲದೆ ಮದನ್ ಅವರ ಯುಟ್ಯೂಬ್ ಚಾನೆಲ್ `ಮದನ್ ಡೈರಿ'ಯನ್ನು ಕೂಡ ಬಂದ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News