ಅಮಿತಾಭ್ ಬಚ್ಚನ್ ಅವರ ಪೊಲೀಸ್ ಅಂಗರಕ್ಷಕನ ವಾರ್ಷಿಕ ಆದಾಯ ರೂ. 1.5 ಕೋಟಿ?
ಮುಂಬೈ: ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಅಂಗರಕ್ಷಕನಾಗಿ 2015ರಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್‍ಸ್ಟೇಬಲ್ ಜಿತೇಂದ್ರ ಶಿಂಧೆ ಅವರು ವರ್ಷಕ್ಕೆ ರೂ. 1.5 ಕೋಟಿ ಸಂಪಾದಿಸುತ್ತಿದ್ದಾರೆಂಬ ಕುರಿತು ಸುದ್ದಿಗಳು ಹೊರಬೀಳುತ್ತಿದ್ದಂತೆಯೇ ಅವರನ್ನು ಡಿ ಬಿ ಮಾರ್ಗ್ ಪೊಲೀಸ್ ಠಾಣೆಗೆ ವರ್ಗಾಯಿಸಿ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗ್ರಲೆ ಆದೇಶ ಹೊರಡಿಸಿದ್ದಾರೆ.
ಅಮಿತಾಭ್ ಬಚ್ಚನ್ ಅವರಿಗೆ ಎಕ್ಸ್ ಕೆಟಗರಿ ಭದ್ರತೆ ಒದಗಿಸಲಾಗುತ್ತಿರುವುದರಿಂದ ಅವರ ಅಂಗರಕ್ಷಕರಾಗಿ ನಾಲ್ಕು ಪೊಲೀಸ್ ಕಾನ್‍ಸ್ಟೇಬಲ್‍ಗಳಿದ್ದು ಇಬ್ಬರು ಹಗಲು ಹೊತ್ತು ಕರ್ತವ್ಯದಲ್ಲಿದ್ದರೆ ಇಬ್ಬರು ರಾತ್ರಿ ಕರ್ತವ್ಯದಲ್ಲಿರುತ್ತಾರೆ. ಈ ನಾಲ್ಕು ಮಂದಿಯ ಪೈಕಿ ಶಿಂಧೆ ಒಬ್ಬರಾಗಿದ್ದರು.
ಹೊಸ ವರ್ಗಾವಣೆ ನೀತಿಯನ್ವಯ ಅವರನ್ನು ವರ್ಗಾಯಿಸಲಾಗಿದೆ ಹಾಗೂ ಯಾವುದೇ ಕಾನ್‍ಸ್ಟೇಬಲ್ ಒಂದೇ ಕಡೆ ಐದು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸುವಂತಿಲ್ಲ ಎಂಬ ನಿಯಮಾನುಸಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಶಿಂಧೆ ಅವರ ವಾರ್ಷಿಕ ಆದಾಯದ ಕುರಿತಾದ ಸುದ್ದಿಗಳ ಕುರಿತಂತೆ ತನಿಖೆ ನಡೆಸಲಾಗುವುದು ಹಾಗೂ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗುವುದು ಎಂಬ ಮಾಹಿತಿಯನ್ನೂ ಅಧಿಕಾರಿಗಳು ನೀಡಿದ್ದಾರೆ.