ಆಧಾರ್ ಕಾರ್ಡ್ ತೋರಿಸದ ಕಾರಣಕ್ಕೆ ಬೀದಿ ವ್ಯಾಪಾರಿಗೆ ಥಳಿಸಿದ ದುಷ್ಕರ್ಮಿಗಳು
ಭೋಪಾಲ್: ಮಧ್ಯಪ್ರದೇಶದ ದೆವಾಸ್ ಜಿಲ್ಲೆಯಲ್ಲಿ ತನ್ನ ಆಧಾರ್ ಕಾರ್ಡ್ ತೋರಿಸದ ಕಾರಣಕ್ಕಾಗಿ ಬೀದಿ ವ್ಯಾಪಾರಿಯೊಬ್ಬರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಥಳಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಹಟ್ಪಿಪಲಿಯಾ ಪೊಲೀಸ್ ಠಾಣೆಯಲ್ಲಿ ಥಳಿತಕ್ಕೊಳಗಾಗಿರುವ 36 ವರ್ಷದ ಝಹೀರ್ ಖಾನ್ ದೂರು ದಾಖಲಿಸಿದ್ದಾರೆ. ಇಬ್ಬರು ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಹಾಗೂ ಗ್ರಾಮಕ್ಕೆ ಹಿಂತಿರುಗದಂತೆ ಒತ್ತಾಯಿಸಿದ್ದಾರೆ ಎಂದು ಅಮ್ಲಾತಾಝ್ ಹಳ್ಳಿಯ ನಿವಾಸಿ ಖಾನ್ ದೂರಿನಲ್ಲಿ ತಿಳಿಸಿದ್ದಾರೆ.
"ಝಹೀರ್ ಖಾನ್ ಟೋಸ್ಟ್‌ಗಳನ್ನು ಮಾರುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಬಂದು ಅವರ ಹೆಸರನ್ನು ಕೇಳಿದರು. ಖಾನ್ ತನ್ನ ಹೆಸರನ್ನು ಹೇಳಿದರು. ಅವರು ಖಾನ್ ಬಳಿ ಆಧಾರ್ ಕಾರ್ಡ್ ತೋರಿಸುವಂತೆ ಒತ್ತಾಯಿಸಿದರು. ಖಾನ್ ಅದು ತನ್ನ ಬಳಿ ಇಲ್ಲ ಎಂದು ಹೇಳಿದಾಗ, ಇಬ್ಬರು ವ್ಯಕ್ತಿಗಳು ಖಾನ್ ಗೆ ಹೊಡೆಯಲು ಆರಂಭಿಸಿದರು. ಬಳಿಕ ನಿಂದಿಸಿದರು ಹಾಗೂ ತಮ್ಮ ಗ್ರಾಮಕ್ಕೆ ಹಿಂತಿರುಗಬಾರದೆಂದು ಎಚ್ಚರಿಸಿದರು’’ ಎಂದು ದೇವಾಸ್ ಪೊಲೀಸ್ ಅಧೀಕ್ಷಕ ಶಿವದಯಾಳ್ ಸಿಂಗ್ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಣೆಯಿಂದ ನೋವನ್ನು ಉಂಟುಮಾಡುವುದು), 294 (ಅಶ್ಲೀಲ ಭಾಷೆ ಬಳಕೆ ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ ಆರೋಪಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದೋರ್ ನಗರದಲ್ಲಿ ಬಳೆ ಮಾರಾಟಗಾರನನ್ನು ಜನರ ಗುಂಪು ಥಳಿಸಿದ ಕೆಲ ದಿನಗಳ ನಂತರ ಈ ಘಟನೆ ನಡೆದಿದೆ. ಹುಡುಗಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಆ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.