×
Ad

ಹೊಳಪು ಮಾಡಿಕೊಡುವುದಾಗಿ ಹೇಳಿ ಚಿನ್ನಾಭರಣ ವಂಚನೆ: ದೂರು

Update: 2021-08-27 18:03 IST

ಪುತ್ತೂರು: ಚಿನ್ನಾಭರಣವನ್ನು ಹೊಳಪು ಮಾಡಿ ಕೊಡುವುದಾಗಿ ಹೇಳಿ ಮಹಿಳೆಯೊಬ್ನರ ಐದೂವರೆ ಪವನ್ ಚಿನ್ನವನ್ನು ಅಪರಿಚಿತ ವ್ಯಕ್ತಿ ಯೊಬ್ಬ ವಂಚನೆ ನಡೆಸಿ ಪರಾರಿಯಾದ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಎಂಬಲ್ಲಿ ನಡೆದಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯೆ ಇಂದಿರಾ ವಂಚನೆಗೆ ಒಳಗಾದ ಮಹಿಳೆ. ಅವರು ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಅಟೋ ರಿಕ್ಷಾದಲ್ಲಿ ಬಂದ ಅಪರಿಚಿತ ವಂಚಕ ಮನೆಯ ಶೋಕೇಸ್, ಟಿವಿ, ಬೆಳ್ಳಿ, ಬಂಗಾರದ ಆಭರಣ ಸೇರಿದಂತೆ ಹಲವು ವಸ್ತುಗಳನ್ನು ಹೊಳಪು ಮಾಡುವ  ಪೌಡರ್ ಮಾರಾಟ ಮಾಡುವ ಸೇಲ್ಸ್ ಮ್ಯಾನ್ ಎಂದು ಇಂದಿರಾರವರಲ್ಲಿ  ಪರಿಚಯಿಸಿ ಕೊಂಡಿದ್ದಾನೆ. ಇದನ್ನು ಪರಿಶೀಲಿಸಲು ತಮ್ಮ ಕಾಲಿನ ಗೆಜ್ಜೆಯನ್ನು ಮಹಿಳೆ ಆತನಿಗೆ ಕೊಟ್ಟಿದ್ದಾರೆ. ವಂಚಕ ಆ ಗೆಜ್ಜೆಯನ್ನು ಹಳದಿ ಪೌಡರ್ ಬಳಸಿ ಹೊಳೆಯುವಂತೆ ಮಾಡಿಕೊಟ್ಟಿದ್ದ. ಇದರಿಂದ ಪ್ರಭಾವಿತರಾದ ಇಂದಿರಾರ ಅವರು ತಮ್ಮ ಮಾಂಗಲ್ಯ ಸರ, ಚೈನು, ಎರಡು ಬಲೆಗಳನ್ನು ಕಳಚಿ ವ್ಯಕ್ತಿಯ ಕೈಗೆ ಕೊಟ್ಟಿದ್ದಾರೆ. ಈ ವೇಳೆ ಚಿನ್ನಾಭರಣಗಳ ಮೇಲೆ ಹಳದಿ ಪೌಡರ್ ಸುರಿದು, ಲಿಕ್ವಿಡ್ ಮತ್ತು ಜೆಲ್ ಹಾಕಿ ಬ್ರೆಷ್ ಬಳಸಿ ತೊಳೆಯುವಂತೆ ನಟಿಸಿ ಬಳಿಕ ಬ್ಯಾಟರಿ ಚಾಲಿತ ಬೆಂಕಿ ನೀರಲ್ಲಿ ಕುದಿಸಿದ್ದಾನೆ. ನಂತರ ನೀರಿನಿಂದ ತೊಳೆದು ಅರಿಶಿನ ಪುಡಿ ಹಾಕಿ, ಪೇಪರ್ ಒಂದರಲ್ಲಿ ಪೊಟ್ಟಣ ಕಟ್ಟಿ ಕೊಟ್ಟಿದ್ದಾನೆ. ಅರ್ಧ ಗಂಟೆಯ ಬಳಿಕ ಪೊಟ್ಟಣ ತೆಗೆಯುವಂತೆ ಇಂದಿರಾ ಅವರಿಗೆ ತಿಳಿಸಿ ವಂಚಕ ಅಲ್ಲಿಂದ ತೆರಳಿದ್ದ. ಆದರೆ ಅನುಮಾನಗೊಂಡ ಇಂದಿರಾ ಅವರು ಐದು ನಿಮಿಷ ಕಳೆದು ಪೊಟ್ಟಣ ತೆರೆದು ನೋಡಿದಾಗ ಮಾಂಗ್ಯಲ ಸರ ಸೇರಿದಂತೆ ತಾನು ನೀಡಿದ್ದ ಚಿನ್ನಾಭರಣಗಳು ತುಂಡು ತುಂಡಾಗಿರುವುದು ಕಂಡುಬಂದಿದೆ. ತಾನು  ನೀಡಿದ್ದ ಚಿನ್ನಾಭರಣಗಳಲ್ಲಿದ್ದ ಚಿನ್ನದಂಶವನ್ನು ವಂಚಕ ದ್ರವ ಮಾದರಿಯಲ್ಲಿ ಸಂಗ್ರಹಿಸಿ ಪರಾರಿಯಾಗಿದ್ದಾನೆ ಎಂಬುವುದು ಅವರಿಗೆ ಅರಿವಾಗಿತ್ತು. ಬಳಿಕ ಅವರು ಪೊಲೀಸರಿಗೆ ದೂರು ನೋಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪುತ್ತೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News