×
Ad

ಮನಪಾ ಗಮನಕ್ಕೆ ತಾರದೆ ಮಲ್ಟಿಲೆವಲ್ ಕಾರು ಪಾರ್ಕಿಂಗ್; ಮೇಯರ್ ಅಸಮಾಧಾನ: ಯೋಜನೆ ತಡೆಗೆ ಸೂಚನೆ

Update: 2021-08-27 19:15 IST

ಮಂಗಳೂರು, ಆ.27: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಬಾಳಂಭಟ್ ಸಭಾಂಗಣದ ಬಳಿ ನಿರ್ಮಿಸಲಾಗುತ್ತಿರುವ ಮಲ್ಟಿಲೆವೆಲ್ ಹೈಡ್ರೋಲಿಕ್ ಕಾರು ಪಾರ್ಕಿಂಗ್ ಮಂಗಳೂರು ಮಹಾನಗರ ಪಾಲಿಕೆ ಜಾಗದಲ್ಲಿ ನಿರ್ಮಾಣವಾಗುತ್ತಿದ್ದರೂ ಪಾಲಿಕೆಯ ಗಮನಕ್ಕೆ ಬಂದಿಲ್ಲ. ಪಿಪಿಪಿ ಮಾದರಿಯಲ್ಲಿ ಅನುಷ್ಠಾನವಾಗುತ್ತಿರುವ ಯೋಜನೆ ಬಗ್ಗೆ ಕನಿಷ್ಠ ಪಾಲಿಕೆಯ ಮೇಯರ್‌ಗೂ ಮಾಹಿತಿ ನೀಡಲಾಗಿಲ್ಲ. ಇಂತಹದ್ದೊಂದು ಆಕ್ಷೇಪ, ಆರೋಪ ಇಂದು ಮನಪಾ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಯ ಜತೆಗೆ ಮೇಯರ್ ಪ್ರೇಮಾನಂದ ಶೆಟ್ಟಿಯವರ ಅಸಮಾಧಾನಕ್ಕೂ ಕಾರಣವಾಯಿತು.

ಮಾತ್ರವಲ್ಲದೆ, ಯೋಜನೆಯ ಕಾಮಗಾರಿಯನ್ನು ತಡೆ ಹಿಡಿಯುವಂತೆಯೂ ಮೇಯರ್ ಪ್ರೇಮಾನಂದ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಯೋಜನೆ ಪಿಪಿಪಿ ಮಾದರಿಯಲ್ಲಿ ನಡೆಯುವುದಾದರೂ ಇದಕ್ಕೆ ಮನಪಾ ಸದಸ್ಯರ ಸಹಮತ ಅಗತ್ಯವಿದೆ. ಸದನದಲ್ಲಿ ಯೋಜನೆಯನ್ನು ಮಂಡಿಸಿ ಮಂಜೂರಾತಿ ಪಡೆಯಬೇಕು. ಹಾಗಾಗಿ ಸದ್ಯ ಕಾಮಗಾರಿಯನ್ನು ತಡೆಯುವಂತೆ ಮೇಯರ್ ಪ್ರೇಮಾನಂದ ಶೆಟ್ಟಿ ಸೂಚಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಬಾಳಂಭಟ್ ಸಭಾಂಗಣದ ಎದುರು ಹೈಡ್ರೋಲಿಕ್ ಕಾರು ಪಾರ್ಕಿಂಗ್ ನಿರ್ಮಾಣವಾಗುತ್ತಿದೆ. ಆದರೆ ಇದು ಮನಪಾ ಗಮನಕ್ಕೆ ಬಂದಿಲ್ಲ. ಮೇಯರ್‌ರವರಲ್ಲಿ ಕೇಳಿದರೆ ಅವರಿಗೂ ಮಾಹಿತಿ ಇಲ್ಲ ಎಂದು ಸದಸ್ಯರಾದ ಅಬ್ದುಲ್ ಲತೀಫ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ವಿಪಕ್ಷ ನಾಯಕ ವಿನಯ ರಾಜ್ ಮಾತನಾಡಿ, 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮಲ್ಟಿಲೆವೆಲ್ ಕಾರು ಪಾರ್ಕಿಂಗ್ ಆ ಜಾಗದಲ್ಲಿ ಸೂಕ್ತವಲ್ಲ. ಅಲ್ಲಿ ಯಾವುದೇ ಶಾಪಿಂಗ್ ಹಬ್ ಇಲ್ಲದಿರುವಾಗ ಈ ಯೋಜನೆ ವ್ಯರ್ಥ. ಸ್ಮಾರ್ಟ್ ಸಿಟಿ ಯೋಜನೆ ಇಲ್ಲಿನ ಮೀನುಗಾರಿಕೆ, ಬಂದರು ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಸರಕಾರದಿಂದ ಮಂಜೂರು ಆಗಿರುವುದು. ಮೀನುಗಾರಿಕಾ ಧಕ್ಕೆಯಲ್ಲಿ 2000ಕ್ಕೂ ಅಧಿಕ ಮೀನುಗಾರಿಕಾ ಬೋಟ್‌ಗಳಿವೆ. ಮೀನುಗಾರರು ಸೇರಿದಂತೆ ಲಕ್ಷಾಂತರ ಮಂದಿ ಪರೋಕ್ಷವಾಗಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿ ವಾರ್ಫ್ ಇಲ್ಲ, ಮೀನು ಮಾರಾಟಕ್ಕೆ ಸೂಕ್ತ ಶೆಡ್ ಇಲ್ಲ. ಅದೆಲ್ಲಾ ಮಾಡುವುದು ಬಿಟ್ಟು ಈ ರೀತಿ ಹಣ ಖರ್ಚು ಮಾಡುವುದು ಯಾಕೆ ಎಂದು ಪ್ರಶ್ನಿಸಿದರು.

ಇದು ಪಿಪಿಪಿ ಮಾದರಿಯಲ್ಲಿ ಆಗುತ್ತಿರುವ ಯೋಜನೆ. ಇದಕ್ಕೆ ಸ್ಮಾರ್ಟ್ ಸಿಟಿಹಣ ಬಳಕೆ ಮಾಡಲಾಗುತ್ತಿಲ್ಲ ಎಂದು ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ಪ್ರತಿಕ್ರಿಯಿಸಿದರು. ಈ ಸಂದರ್ಭ ಕೆಲಹೊತ್ತು ಸದನದಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಮಾರ್ಟ್ ಸಿಟಿ ಅಧಿಕಾರಿ ಪ್ರತಿಕ್ರಿಯಿಸಿ, ಮನಪಾದಿಂದ 2 ಬಾರಿ ಅನುಮತಿ ಪಡೆದು ಅಲ್ಲಿದ್ದ ಬಿಲ್ಡಿಂಗ್ ಕೆಡವಿ ಸೊತ್ತನ್ನು ಮಾರಾಟ ಮಾಡಿ ಟೆಂಡರ್ ಕರೆಯಲಾಗಿದೆ. ಇದು ಸ್ಮಾರ್ಟ್ ಸಿಟಿ ಯೋಜನೆಯಡಿ ಪಿಪಿಪಿ ಮಾದರಿಯಲ್ಲಿ ಆಗುತ್ತಿರುವ ಯೋಜನೆಯಾದ್ದರಿಂದ ಸ್ಮಾರ್ಟ್ ಸಿಟಿಯ ಆಡಳಿತ ನಿರ್ದೇಶಕರೇ ಅನುಮತಿ ನೀಡಬಹುದು ಎಂದು ಹೇಳಿದರು.

ಈ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದ ಮೇಯರ್ ಪ್ರೇಮಾನಂದ ಶೆಟ್ಟಿ, ಮನಪಾ ಕೂಡಾ ಸ್ಮಾರ್ಟ್ ಸಿಟಿ ಯೋಜನೆಯ ಶೇ. 50ರ ಭಾಗೀದಾರರು. ಈ ಹಿಂದೆ ಕ್ಲಾಕ್ ಟವರ್ ಕೂಡಾ ಇದೇ ರೀತಿ ಸ್ಮಾರ್ಟ್ ಸಿಟಿ ಎಂಡಿಯವರ ಅನುಮತಿಯಡಿ ಕಾಮಗಾರಿ ಆರಂಭಿಸಲಾಗಿತ್ತು. ಆ ಸಂದರ್ಭ ವಿಪಕ್ಷದಲ್ಲಿದ್ದ ನಾನು ಆಕ್ಷೇಪ ವ್ಯಕ್ತಪಡಿಸಿ ಕೌನ್ಸಿಲ್‌ನ ಅನುಮೋದನೆ ಪಡೆದು ಕಾಮಗಾರಿ ಮಾಡಲಾಗಿತ್ತು. ಈ ಯೋಜನೆ ಕೂಡಾ ಅದೇ ರೀತಿ ಆಗಬೇಕು. ಅಲ್ಲಿಯವರೆಗೆ ಯೋಜನೆ ಮುಂದುವರಿಸಬಾರದು ಎಂದು ಸ್ಪಷ್ಟಪಡಿಸಿದರು.

ಮೀನುಗಾರಿಕಾ ಕಾಲೇಜಿಗೆ ವಿವಿ ಸ್ಥಾನಮಾನ: ಸರಕಾರಕ್ಕೆ ಪ್ರಸ್ತಾವನೆಮಂಗಳೂರಿನ ಮೀನುಗಾರಿಕಾ ಕಾಲೇಜಿಗೆ ವಿಶ್ವವಿದ್ಯಾನಿಲಯದ ಸ್ಥಾನಮಾನ ನೀಡಬೇಕೆಂದು ಸದಸ್ಯರಾದ ಭರತ್ ಕುಮಾರ್ ಅವರ ಬೇಡಿಕೆಯ ಕುರಿತಾದ ಪರಿಷತ್ತಿನ ಕಾರ್ಯಸೂಚಿಯಲ್ಲಿ ಮಂಡಿಸಲಾಗಿದ್ದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಮನಪಾ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News