×
Ad

ದ.ಕ. ಜಿಲ್ಲೆಯಲ್ಲಿ ಮುಂಗಾರು ಮತ್ತೆ ಚುರುಕು

Update: 2021-08-27 19:25 IST

ಮಂಗಳೂರು, ಆ. 27: ಕಳೆದ ಕೆಲವು ದಿನದಿಂದ ಬಿಸಿಲಿನ ವಾತಾವರಣವಿದ್ದ ದ.ಕ.‌ಜಿಲ್ಲೆಯಲ್ಲಿ ಶುಕ್ರವಾರ ಮುಂಗಾರು ಮಳೆ ಮತ್ತೆ ಚುರುಕುಗೊಂಡಿವೆ. ಗುರುವಾರ ರಾತ್ರಿಯಿಂದಲೇ ಆರಂಭಗೊಂಡಿದ್ದ ಮಳೆಯು ಶುಕ್ರವಾರ ಬಿರುಸು ಪಡೆದಿದೆ. ಜಿಲ್ಲೆಯ ಬಹುತೇಕ ಕಡೆ ಉತ್ತಮ ಮಳೆಯಾಗಿದೆ.

ಮಧ್ಯಾಹ್ನ ಬಳಿಕ ಕೆಲವೆಡೆ ಮಳೆಯೊಂದಿಗೆ ಗುಡುಗು, ಗಾಳಿಯ ಅಬ್ಬರವೂ ಇತ್ತು. ಘಟ್ಟದ ತಪ್ಪಲಿನ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕು ಸಹಿತ ಗ್ರಾಮೀಣ ಪ್ರದೇಶದಲ್ಲಿ ದಟ್ಟ ಮೋಡ ಕವಿದು, ಮಳೆ ಸುರಿದಿದೆ.

ಆರೆಂಜ್ ಅಲರ್ಟ್ 

ವಾರಾಂತ್ಯ ವೇಳೆಗೆ ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿತ್ತು. ಅದರಂತೆ ಗುರುವಾರ ರಾತ್ರಿಯಿಂದ ಮಳೆ ಸುರಿದಿದ್ದು, ಶನಿವಾರ ಮತ್ತು ರವಿವಾರ ಕೂಡ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಶನಿವಾರ ಮತ್ತು ರವಿವಾರ  ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಮೀನುಗಾರರಿಗೆ ಎಚ್ಚರಿಕೆ

ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಮೀನುಗಾರರು ಆ.30ರ ವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಳೆ ವಿವರ

ಬೆಳ್ತಂಗಡಿ 25 ಮಿ.ಮೀ., ಬಂಟ್ವಾಳ 13, ಮಂಗಳೂರು 15, ಪುತ್ತೂರು 4, ಸುಳ್ಯ 16, ಮೂಡುಬಿದಿರೆ 18 ಮತ್ತು ಕಡಬದಲ್ಲಿ 6 ಮಿ.ಮೀ. ಸಹಿತ ಸರಾಸರಿ 16 ಮಿ.ಮೀ. ಮಳೆಯಾಗಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 27.9  ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News