ಕೋವಿಡ್ ಇದ್ದರೆ ಸರಳ ಪರ್ಯಾಯಕ್ಕೂ ಸಿದ್ಧ: ಕೃಷ್ಣಾಪುರಶ್ರೀ
ಉಡುಪಿ, ಆ. 27: ಮುಂದಿನ ನವೆಂಬರ್ ವೇಳೆಗೆ ಕೋವಿಡ್-19 ಸಾಂಕ್ರಾಮಿಕದ ತೀವ್ರತೆ ತಗ್ಗದಿದ್ದರೆ ಕೇವಲ ಸಾಂಪ್ರದಾಯಿಕ ಪರ್ಯಾಯಕ್ಕೆ ಬದ್ಧವಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುವುದು. ಲೋಕಕ್ಕೆ, ಜನರಿಗೆ ಕಂಟಕವಾಗಿ ಪರ್ಯಾಯ ಮಾಡಬೇಕೆನ್ನುವ ಹಠ ತಮಗಿಲ್ಲ ಎಂದು ಉಡುಪಿ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು ಹೇಳಿದ್ದಾರೆ.
ಮುಂದಿನ 2022ರ ಜ.18ರಂದು ನಾಲ್ಕನೇ ಬಾರಿ ಶ್ರೀಕೃಷ್ಣಪೂಜಾ ಕೈಂಕರ್ಯದ ಪರ್ಯಾಯ ಪೀಠಾರೋಹಣ ಮಾಡಲಿರುವ ಹಿನ್ನೆಲೆಯಲ್ಲಿ ಕೃಷ್ಣಾಪುರ ಮಠದ ಶ್ರೀಕೃಷ್ಣ ಸಭಾಭವನದಲ್ಲಿ ಶುಕ್ರವಾರ ನಡೆದ ಪರ್ಯಾಯ ಸಿದ್ಧತೆಯ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಈಗಾಗಲೇ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.
ನವೆಂಬರ್ ಬಳಿಕ ಸೋಂಕಿನ ತೀವ್ರತೆ ಕಡಿಮೆಯಾದರೆ ಎಂದಿನಂತೆ ಪರ್ಯಾಯ ಆಚರಿಸೋಣ. ಜನರ ಆರ್ಥಿಕ ಸಂಕಷ್ಟ ವನ್ನರಿತು, ದೇವರ ಮೇಲಿನ ಭಕ್ತಿ ಶ್ರದ್ಧೆಯಿಂದ ನೀಡುವ ಕಾಣಿಕೆಯನ್ನು ಸ್ವೀಕರಿಸಲಾಗುವುದು ಎಂದ ಕೃಷ್ಣಾಪುರ ಸ್ವಾಮೀಜಿ, ಲೋಕಕಲ್ಯಾಣಾರ್ಥ ದೇರ ಪೂಜೆ ಮಾಡಬೇಕು ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಕೋವಿಡ್ ಆತಂಕ, ಅನಿಶ್ಚಿತತೆ ನಡುವೆ ಅಕ್ಟೋಬರ್, ನವೆಂಬರ್‌ನೊಳಗೆ ಉಡುಪಿ ಜಿಲ್ಲೆ ಸುರಕ್ಷಿತ ವಲಯಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದರು. 18+ವಯಸ್ಸಿನ 9.57ಲಕ್ಷ ಜನರಿಗೆ ಕೋವಿಡ್ ಲಸಿಕೆ ಹಾಕಿದ್ದು 6.5ಲಕ್ಷ ಜನರಿಗೆ ಮೊದಲ ಡೋಸ್ ದೊರೆತಿದೆ. ನವೆಂಬರ್‌ನೊಳಗೆ ಮೊದಲ ಡೋಸ್ ಶೇ. 80ಹಾಗೂ 2ನೇ ಡೋಸ್ ಶೇ. 60 ತಲುಪುವ ಗುರಿಯಿದೆ ಎಂದರು.
ವಾರದಲ್ಲಿ ಶೇ.2.1ರಷ್ಟಿದ್ದ ಕೋವಿಡ್ ಪೊಸಿಟಿವಿಟಿ ಮೂರು ದಿನಗಳಲ್ಲಿ ಶೇ. 1.45ಕ್ಕೆ ಇಳಿದಿದೆ. ಹೊರೆಕಾಣಿಕೆ, ಪುರಪ್ರವೇಶ, ಪರ್ಯಾಯ ಮೆರವಣಿಗೆಯ ತಯಾರಿ ಜತೆಗೆ ಸರಕಾರದ ನೆರವನ್ನು ಪಡೆಯೋಣ. ವಿಜೃಂಭಣೆಯಿಂದ ಪರ್ಯಾಯ ಆಚರಿಸೋಣ ಎಂದು ಶಾಸಕರು ಹೇಳಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ, ನಾಡಹಬ್ಬ ಪರ್ಯಾಯದ ವಿವಿಧ ಜವಾಬ್ದಾರಿಯನ್ನು ನಗರಸಭೆ ನಿರ್ವಹಿಸುವ ಭರವಸೆ ನೀಡಿದರು.
ಕಟೀಲು ವಾಸುದೇವ ಅಸ್ರಣ್ಣ, ಲಕ್ಷ್ಮೀನಾರಾಯಣ ಅಸ್ರಣ್ಣ, ಪ್ರದೀಪ್ ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು,ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಾಗರಾಜ ಆಚಾರ್ಯ, ಉಡುಪಿ ನಗರಸಭೆ ಪೌರಾಯುಕ್ತ ಡಾ. ಉದಯ್ ಶೆಟ್ಟಿ, ಉದ್ಯಮಿ ಕೆ. ಉಯಕುಮಾರ್ ಶೆಟ್ಟಿ ಮಾತನಾಡಿದರು.
ಉಡುಪಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮಿ ಮಂಜು ಕೊಳ, ಭುವನಾಭಿರಾಮ ಉಡುಪ, ಶ್ರೀಪತಿ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.ಸೂರ್ಯನಾರಾಯಣ ಉಪಾಧ್ಯಾಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಗೊೀಪಾಲಕೃಷ್ಣ ಉಪಾಧ್ಯಾಯ ವಂದಿಸಿದರು.
ಕೃಷ್ಣಾಪುರ ಶ್ರೀಗಳಿಗೆ ನಾಲ್ಕನೇ ಪರ್ಯಾಯ
ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠದ ಪರಂಪರೆಯಲ್ಲಿ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು 34ನೇ ಯತಿಯಾಗಿದ್ದು, ಅವರ ನಾಲ್ಕನೇ ಪರ್ಯಾಯದ ಪೂರ್ವಭಾವಿಯಾಗಿ ನಡೆಯುವ ನಾಲ್ಕು ಮುಹೂರ್ತಗಳಲ್ಲಿ ಈಗಾಗಲೇ ಬಾಳೆ, ಅಕ್ಕಿ, ಕಟ್ಟಿಗೆ ಮುಹೂರ್ತ ಮುಗಿದಿವೆ. ತ್ತ ಮುಹೂರ್ತ ವಷ್ಟೇ ಬಾಕಿಯಿದೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯದ 32ನೇ ಚಕ್ರ ಈ ನಡೆಯುತಿದ್ದು, ಇದರಲ್ಲಿ ಪಲಿಮಾರುಶ್ರೀಗಳ ಪರ್ಯಾಯ ಮುಗಿದಿದ್ದು, ಈಗ ಅದಮಾರು ಪರ್ಯಾಯ ನಡೆಯುತ್ತಿದೆ. 2022ರ ಜ.18ರಿಂದ ಕೃಷ್ಣಾಪುರಶ್ರೀಗಳ ಪರ್ಯಾಯ ಪ್ರಾರಂಭಗೊಳ್ಳಲಿದೆ.