×
Ad

​ಆ. 28: ‘ಮಹಿಳಾ ಸುರಕ್ಷತೆಗೆ ಒಂದು ದಿನ’- ಪೊಲೀಸ್ ಆಯುಕ್ತರ ಆಂದೋಲನ

Update: 2021-08-27 20:22 IST

ಮಂಗಳೂರು, ಆ.27: ಮಹಿಳಾ ಸುರಕ್ಷೆತೆಗೆ ಒತ್ತು ನೀಡುವ ದೃಷ್ಟಿಯಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆ.28ರಂದು ‘ಮಹಿಳಾ ಸುರಕ್ಷತೆಗಾಗಿ ಒಂದು ದಿನ’- ‘112ಕ್ಕೆ ಕರೆ ನಿಮ್ಮಿಂದ-ನೀವಿರುವಲ್ಲಿಗೆ ಭೇಟಿ ನಮ್ಮಿಂದ’ ಪರಿಕಲ್ಪನೆಯಲ್ಲಿ ಆಂದೋಲನ ಮಾದರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಪೊಲೀಸ್ ಕಮಿಷನರ್ ಸೇರಿದಂತೆ 100ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳ ತಂಡ ಮಹಿಳಾ ಸಿಬ್ಬಂದಿಯೊಂದಿಗೆ ಇಆರ್‌ಎಸ್‌ಎಸ್-112ರ ಅಡಿಯಲ್ಲಿ ಸಾರ್ವಜನಿಕರ ತುರ್ತು ಕರೆಗೆ ಸ್ಪಂದಿಸಲಿದೆ.

2020ರ ಡಿಸೆಂಬರ್ 14ರಿಂದ ಮಂಗಳೂರಲ್ಲೂ 122 ತುರ್ತು ನಂಬರ್ ಜಾರಿಗೆ ಬಂದಿದೆ. ಕಮಿಷರೇಟ್ ವ್ಯಾಪ್ತಿಯಲ್ಲಿ 19 ಪೊಲೀಸ್ ವಾಹನಗಳು ಇವೆ. ಯಾವುದೇ ತುರ್ತು ಸಂದರ್ಭದಲ್ಲಿ 5ರಿಂದ 10 ನಿಮಿಷ ಒಳಗೆ ಸ್ಥಳಕ್ಕೆ ಭೇಟಿ ನೀಡುತ್ತದೆ. ಮೂಡುಬಿದಿರೆ, ಕೊಣಾಜೆ ಹಾಗೂ ಮುಲ್ಕಿ ಪ್ರದೇಶಕ್ಕೆ 15ರಿಂದ 20 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ವಾಹನ ತಲುಪುತ್ತದೆ. ಮಹಿಳಾ ಸುರಕ್ಷೆ ಮೊಟ್ಟ ಮೊದಲ ಆದ್ಯತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆಗೆ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಒಲಿಂಪಿಯನ್ ಎಂ.ಆರ್. ಪೂವಮ್ಮ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಮಹಿಳೆಯರ ಕೌಟುಂಬಿಕ ಸಮಸ್ಯೆ, ವಿದ್ಯಾರ್ಥಿನಿಯರಿಗೆ ಕಿರುಕುಳ ಘಟನೆ, ಸಾರ್ವನಿಕ ಸ್ಥಳ, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್‌ಗಳಲ್ಲಿ ತೊಂದರೆ, ಕೆಲಸ ಮಾಡುವ ಸ್ಥಳದಲ್ಲಿ ಕಿರುಕುಳ, ಸೈಬರ್ ಸಮಸ್ಯೆ, ಫೋಟೊ ವೈರಲ್, ವೈಯಕ್ತಿಕ ಮೊಬೈಲ್‌ಗೆ ಕರೆ, ಎಸ್‌ಎಂಎಸ್ ಚೇಷ್ಟೆ, ಪ್ರವಾಸಿಗರಿಗೆ ತೊಂದರೆಯಂತಹ ಯಾವುದೇ ಪ್ರಕರಣವನ್ನು ಈ ವೇಳೆ ಪೊಲೀಸರ ಗಮನಕ್ಕೆ ತರಬಹುದು ಎಂದು ಹೇಳಿದರು.

ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು, ಹಿರಿಯ ನಾಗರಿಕರು ಯಾರೇ ಆದರೂ ಕರೆ ಮಾಡಿದರೆ ನಾವು ಕೂಡಲೇ ಸ್ಪಂದಿಸುತ್ತೇವೆ. ನಿಮ್ಮ ಸ್ಥಳದ ವಿವರ ತಿಳಿಸಿದರೆ ಕೂಡಲೇ ಮನೆಗೆ ಬಂದು ಚರ್ಚೆ ನಡೆಸಲಾಗುವುದು. ಶನಿವಾರ ವೀಕೆಂಡ್ ಕರ್ಫ್ಯೂ ಇದ್ದರೂ ನಿಮ್ಮ ಸಮಸ್ಯೆ ಕೇಳಲು ಅಡ್ಡಿ ಇಲ್ಲ ಎಂದರು.

ಮಹಿಳೆಯರು ನಗರದಲ್ಲಿ ಹೆಚ್ಚು ಸುರಕ್ಷಿತವಾಗಿ ಇರುವಂತೆ ಮಾಡಲು ಇದು ನಮ್ಮ ಸಣ್ಣ ಪ್ರಯತ್ನ. ಈ ಪ್ರಯತ್ನಕ್ಕೆ ಕಮಿಷನರೇಟ್ ವ್ಯಾಪ್ತಿಯ ಎಲ್ಲ ನಾಗರಿಕರು ಸಹಕಾರ ನೀಡಿ, ನಿಮ್ಮ ಅಕ್ಕಪಕ್ಕದಲ್ಲೂ ಈ ಸಮಸ್ಯೆ ಇದ್ದರೂ ಗಮನಕ್ಕೆ ತರಬಹುದು. ಚರ್ಚಿತ ವಿಚಾರವನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಕಮಿಷನರ್ ಶಶಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News