×
Ad

ಆದಿತ್ಯನಾಥ್ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದ ಮಾಜಿ ಐಪಿಎಸ್ ಅಧಿಕಾರಿಯ ನಾಟಕೀಯ ರೀತಿಯ ಬಂಧನ; ವೀಡಿಯೊ ವೈರಲ್

Update: 2021-08-27 20:45 IST
Twitter/@Amitabhthakur

ಲಕ್ನೋ: ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ದ ಸ್ಪರ್ಧಿಸುವುದಾಗಿ ಘೋಷಿಸಿ ತನ್ನ ಉದ್ದೇಶಿತ ರಾಜಕೀಯ ಪಕ್ಷದ ಹೆಸರನ್ನು ಪ್ರಸ್ತಾಪಿಸಿದ್ದ ಉತ್ತರ ಪ್ರದೇಶದ ಮಾಜಿ ಪೊಲೀಸ್ ಅಧಿಕಾರಿಯನ್ನು ಶುಕ್ರವಾರ ನಾಟಕೀಯ ರೀತಿಯಲ್ಲಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರ ಗೃಹ ಸಚಿವಾಲಯದಿಂದ ಬಲವಂತವಾಗಿ ನಿವೃತ್ತರಾಗಿದ್ದ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರು ಎಷ್ಟೇ ಪ್ರತಿರೋಧ, ಪ್ರತಿಭಟನೆ ವ್ಯಕ್ತಪಡಿಸಿದರೂ ರಾಜ್ಯ ರಾಜಧಾನಿಯ ಅವರ ನಿವಾಸದಲ್ಲಿ ಪೊಲೀಸ್ ಇಲಾಖೆಯ  ಜೀಪ್‌ಗೆ ಅವರನ್ನು ಬಲವಂತವಾಗಿ ತಳ್ಳಲಾಯಿತು.

ಪ್ರಾಥಮಿಕ ತನಿಖೆಯ ಸಮಯದಲ್ಲಿ ದೊರೆತ ಪುರಾವೆಗಳು ಠಾಕೂರ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಿವೆ ಎಂದು ಉತ್ತರಪ್ರದೇಶ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿಯನ್ನು ಬಲವಂತವಾಗಿ ಪೊಲೀಸ್ ವಾಹನಕ್ಕೆ ತಳ್ಳುತ್ತಿರುವ ವೀಡಿಯೊ ವೈರಲ್ ಆಗಿದ್ದು, ಪೊಲೀಸರ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

"ನೀವು ನನಗೆ ಎಫ್‌ಐಆರ್ ತೋರಿಸದ ಹೊರತು ನಾನು ಹೋಗುವುದಿಲ್ಲ" ಎಂದು ಠಾಕೂರ್ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಸುತ್ತಿದೆ.

ಜನರಲ್ಲಿ ಬಿರುಕು ಮೂಡಿಸುವ ಮೂಲಕ ಮಾತ್ರ ಬಿಜೆಪಿ ರಾಜಕೀಯ ಉಳಿದುಕೊಂಡಿದೆ. ಈಗ ಬಿಜೆಪಿ ಸರಕಾರದ ಒತ್ತಡದಿಂದಾಗಿ, ಪೊಲೀಸರು ಪೊಲೀಸರ ವಿರುದ್ಧ ಕೆಲಸ ಮಾಡುವಂತಾಯಿತು. ನಿವೃತ್ತ ಐಪಿಎಸ್ ಅಧಿಕಾರಿಯೊಂದಿಗೆ ಈ ರೀತಿ ವರ್ತಿಸಿರುವುದು ಕ್ಷಮಿಸಲಾಗದು ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಘಟನೆಯ ವೀಡಿಯೊ ಸಹಿತ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News