ತಾಲಿಬಾನ್-ಟರ್ಕಿ ನಡುವೆ ಕಾಬೂಲ್‌ನಲ್ಲಿ ಮಾತುಕತೆ

Update: 2021-08-27 16:39 GMT
photo : PTI

ಕಾಬೂಲ್, ಆ.27: ತಾಲಿಬಾನ್‌ಗಳೊಂದಿಗೆ ಕಾಬೂಲ್‌ನಲ್ಲಿ ಪ್ರಥಮ ಮಾತುಕತೆ ನಡೆಸಲಾಗಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲಿ ನೆರವಾಗಬೇಕೆಂಬ ತಾಲಿಬಾನ್‌ಗಳ ಕೋರಿಕೆಯನ್ನು ಟರ್ಕಿ ಪರಿಶೀಲಿಸುತ್ತಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೊಗನ್ ಶುಕ್ರವಾರ ಹೇಳಿದ್ದಾರೆ.

 ಕಾಬೂಲ್ ವಿಮಾನ ನಿಲ್ದಾಣದಲ್ಲಿರುವ ಸೇನಾ ನೆಲೆಯಲ್ಲಿ ಈ ಮಾತುಕತೆ ನಡೆದಿದೆ. ಇಲ್ಲಿ ಟರ್ಕಿಯ ತಾತ್ಕಾಲಿಕ ರಾಯಭಾರಿ ಕಚೇರಿಯನ್ನೂ ತೆರೆಯಲಾಗಿದೆ. ಮೊದಲ ಸುತ್ತಿನ ಮಾತುಕತೆ ಮೂರೂವರೆ ಗಂಟೆ ನಡೆದಿದ್ದು ಅವಕಾಶ ಸಿಕ್ಕರೆ ಇಂತಹ ಇನ್ನಷ್ಟು ಮಾತುಕತೆ ನಡೆಸಲಾಗುವುದು ಎಂದು ಎರ್ದೊಗನ್ ಹೇಳಿದ್ದಾರೆ. ಮಾತುಕತೆಯ ಬಗ್ಗೆ ವ್ಯಕ್ತವಾಗಿರುವ ಟೀಕೆಗೆ ಪ್ರತಿಕ್ರಿಯಿಸಿರುವ ಅವರು ‘ಅನಿಶ್ಚಿತತೆ ನೆಲೆಸಿರುವ ಈ ವಲಯದಲ್ಲಿ ಸೋಮಾರಿಯಂತೆ ವ್ಯರ್ಥ ಕಾಲಹರಣ ಮಾಡಲು ನಮಗೆ ಇಷ್ಟವಿಲ್ಲ. ಮಾತುಕತೆ ನಡೆಯದಿದ್ದರೆ ಅವರ ನಿರೀಕ್ಷೆಗಳೇನು ಅಥವಾ ನಮ್ಮ ನಿರೀಕ್ಷೆಗಳೇನು ಎಂಬುದು ಹೇಗೆ ತಿಳಿಯುತ್ತದೆ? ರಾಜತಾಂತ್ರಿಕತೆ ಎಂದರೆ ಇದೇ ಅಲ್ಲವೇ ಮಿತ್ರರೇ ?’ ಎಂದು ಪ್ರಶ್ನಿಸಿದ್ದಾರೆ.

 ಕಾಬೂಲ್ ವಿಮಾನ ನಿಲ್ದಾಣದ ಭದ್ರತೆ ಮತ್ತು ನಿರ್ವಹಣೆಗಾಗಿ ಟರ್ಕಿ ತನ್ನ ಸೇನೆಯನ್ನು ಅಫ್ಗಾನ್‌ನಲ್ಲೇ ಇರಿಸಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಬುಧವಾರದಿಂದ ತನ್ನ ಯೋಧರನ್ನು ವಾಪಾಸು ಕರೆಸಿಕೊಳ್ಳುವ ಪ್ರಕ್ರಿಯೆಗೆ ಟರ್ಕಿ ಚಾಲನೆ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಎರ್ದೊಗನ್ ‘ಕಾಬೂಲ್ ವಿಮಾನ ನಿಲ್ದಾಣದ ಭದ್ರತೆಯನ್ನು ತಾನೇ ನಿರ್ವಹಿಸುವುದಾಗಿ ತಾಲಿಬಾನ್ ಹೇಳಿದ್ದು ವ್ಯವಸ್ಥಾಪನೆ ನಿರ್ವಹಿಸುವಂತೆ ನಮ್ಮನ್ನು ಕೋರಿದ್ದು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಶಾಂತಿ ನೆಲೆಸಿದ ಬಳಿಕ ನಿರ್ಧರಿಸಲಿದ್ದೇವೆ ಎಂದರು. ಅಮೆರಿಕದ 13 ಯೋಧರ ಸಹಿತ ಕನಿಷ್ಟ 110 ಮಂದಿ ಮೃತಪಟ್ಟ ಅವಳಿ ಆತ್ಮಹತ್ಯಾ ಬಾಂಬ್ ದಾಳಿಯು, ಅಫ್ಘಾನ್‌ ವಾಯುಪ್ರದೇಶದ ಭದ್ರತೆಯ ಕುರಿತ ವಿವರದ ಮಾಹಿತಿ ಪಡೆಯುವ ಅಗತ್ಯವನ್ನು ಒತ್ತಿಹೇಳಿದೆ ಎಂದರು.

ನೇಟೊ ಸದಸ್ಯನಾಗಿರುವ ಟರ್ಕಿ ತನ್ನ ನೂರಾರು ಯೋಧರನ್ನು ಮೈತ್ರಿಪಡೆಯ ಭಾಗವಾಗಿ ಅಫ್ಗಾನ್‌ ಗೆ ಕಳಿಸಿತ್ತು. ಅಲ್ಲದೆ ಕಳೆದ 6 ವರ್ಷದಿಂದ ಅಫ್ಘಾನ್‌ ವಿಮಾನ ನಿಲ್ದಾಣಗಳ ಭದ್ರತಾ ಕಾರ್ಯದ ಜವಾಬ್ದಾರಿ ನಿರ್ವಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News