16 ಮಂದಿ ನೌಕರರಿಗೆ ಪರಿಹಾರ ನೀಡಲು ಆಡಳಿತ ಮಂಡಳಿ ಒಪ್ಪಿಗೆ : ತಾಯಿ-ಮಕ್ಕಳ ಆಸ್ಪತ್ರೆ ಮುಷ್ಕರ ಕೊನೆ
ಉಡುಪಿ, ಆ.27: ಬಾಕಿ ಸಂಬಳ ಪಾವತಿಗಾಗಿ ಹೋರಾಟ ನಡೆಸಿದ ನೌಕರರಲ್ಲಿ ಪ್ರಮುಖ 16 ಮಂದಿಯನ್ನು ಆಡಳಿತ ಮಂಡಳಿ ಏಕಾಏಕಿ ವಜಾಗೊಳಿಸಿರುವುದನ್ನು ವಿರೋಧಿಸಿ ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳು ಮೂರು ದಿನಗಳಿಂದ ನಡೆಸಿದ ಮುಷ್ಕರ ನಿನ್ನೆ ರಾತ್ರಿ ಮುಕ್ತಾಯಗೊಂಡಿದೆ.
ಆಡಳಿತ ಮಂಡಳಿ ವಜಾಗೊಳಿಸಿದ 16 ಮಂದಿ ನೌಕರರು, ನಿನ್ನೆ ಲೇಬರ್ ಕಚೇರಿಯಲ್ಲಿ ಮಂಗಳೂರಿನ ಲೇಬರ್ ಕಮಿಷನರ್ ನೇತೃತ್ವದಲ್ಲಿ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದು, ಆಡಳಿತ ಮಂಡಳಿ ನೀಡುವ ಪರಿಹಾರ ಮೊತ್ತವನ್ನು ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಾತುಕತೆಯ ವೇಳೆ ಸಿಬ್ಬಂದಿಗಳು ನಮ್ಮನ್ನೆಲ್ಲಾ ಮತ್ತೆ ಸೇವೆಗೆ ತೆಗೆದು ಕೊಳ್ಳಬೇಕು ಅಥವಾ ನಮಗೆ ಹಿಂದಿನ ಬಾಕಿ ಸಂಬಳ ಸೇರಿದಂತೆ ಎರಡು ತಿಂಗಳ ಸಂಬಳ ಹಾಗೂ ಇತರ ಸೌಲಭ್ಯದ ಹಣವನ್ನು ಪರಿಹಾರವಾಗಿ ನೀಡಬೇಕು ಎಂಬ ಶರತ್ತಿನಲ್ಲಿ ಆಡಳಿತ ಮಂಡಳಿ ಎರಡನೇಯದಕ್ಕೆ ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ. ಆಡಳಿತ ಮಂಡಳಿ ಈಗಾಗಲೇ ಸೇವೆ ಯಿಂದ ವಜಾಗೊಳಿಸಿರುವ 16 ಮಂದಿಯನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಒಪ್ಪಿಕೊಳ್ಳಲಿಲ್ಲ ಎಂದು ಹೇಳಲಾಗಿದೆ.
ಹೀಗಾಗಿ 16 ಮಂದಿ ಆಡಳಿತ ಮಂಡಳಿ ನೀಡುವ ಪರಿಹಾರ ಹಣವನ್ನು ಪಡೆದುಕೊಳ್ಳಲು ಒಪ್ಪಿಕೊಂಡಿದ್ದಾರೆ. ಮುಂದಿನ ಗುರುವಾರ ಲೇಬರ್ ಕಮಿಷನರ್ ನೇತೃತ್ವದಲ್ಲಿ ಮತ್ತೊಂದು ಸಭೆಯಲ್ಲಿ ಕರೆಯಲಾಗಿದ್ದು, ಇದರೊಳಗೆ ಪರಿಹಾರ ಹಣ ನೀಡಲು ಆಡಳಿತ ಮಂಡಳಿ ಒಪ್ಪಿಕೊಂಡಿದೆ ಎಂದು ಸಿಬ್ಬಂದಿ ಗಳಲ್ಲೊಬ್ಬರು ತಿಳಿಸಿದರು.
ಹೀಗಾಗಿ ಉಳಿದ ನೌಕರರು ಇಂದಿನಿಂದ ತಮ್ಮ ಮುಷ್ಕರ ನಿಲ್ಲಿಸಿ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. ಇಂದು ಆಡಳಿತ ಮಂಡಳಿ ಈ ನೌಕರರೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರವೇ ಜುಲೈ ತಿಂಗಳ ಸಂಬಳ ನೀಡುವುದೂ ಸೇರಿದಂತೆ ಕೆಲ ಭರವಸೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದ್ದು ವಿವರ ಗೊತ್ತಾಗಿಲ್ಲ.
ಉಡುಪಿಯ ಬಿಆರ್‌ಎಸ್ ಆಸ್ಪತ್ರೆಯ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸೆ.1ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಭೆಯೊಂದನ್ನು ಕರೆದಿದ್ದಾರೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಸಭೆಯಲ್ಲಿ ಆರೋಗ್ಯ ಸಚಿವರು, ಜಿಲ್ಲೆಯ ಸಚಿವರು, ಶಾಸಕರು ಹಾಗೂ ಸದ್ಯ ಆಸ್ಪತ್ರೆಯನ್ನು ನಡೆಸುತ್ತಿರುವ ಬಿಆರ್‌ಎಸ್ ಗ್ರೂಪ್‌ನ ಬಿ.ಆರ್.ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ ಎಂದೂ ಅವರು ಹೇಳಿದ್ದಾರೆ.