ಕ್ರೀಡಾಪಟು ಪಾಕ್ ಅಥವಾ ಬೇರೆ ಯಾವ ದೇಶದವರಾಗಲಿ ಅವರನ್ನು ಗೌರವಿಸಿ: ಚೋಪ್ರಾ ಬೆಂಬಲಿಸಿದ ಬಜರಂಗ್ ಪುನಿಯಾ

Update: 2021-08-28 09:58 GMT

ಹೊಸದಿಲ್ಲಿ: ಒಲಿಂಪಿಕ್ಸ್  ಚಾಂಪಿಯನ್ ನೀರಜ್ ಚೋಪ್ರಾ ತನ್ನ ಹೆಸರನ್ನು "ಮತ್ತಷ್ಟು  ಆಪಪ್ರಚಾರ ಹಾಗೂ  ಕೊಳಕು ಕಾರ್ಯಸೂಚಿಗೆ" ಬಳಸದಂತೆ ಜನರನ್ನು ಒತ್ತಾಯಿಸಿದ ಒಂದು ದಿನದ ನಂತರ ಟೋಕಿಯೊ ಗೇಮ್ಸ್ ಪದಕ ವಿಜೇತ ಬಜರಂಗ್ ಪುನಿಯಾ ಸೇರಿದಂತೆ ಸಹ ಒಲಿಂಪಿಯನ್ ಗಳು ಚೋಪ್ರಾ ಬೆಂಬಲಕ್ಕೆ ನಿಂತಿದ್ದಾರೆ. ಕ್ರೀಡೆಯನ್ನು ತಾರತಮ್ಯ ಮಾಡಲು ಮಾಧ್ಯಮವಾಗಿ ಬಳಸಬಾರದು ಎಂದು ಅವರು ಆಗ್ರಹಿಸಿದ್ದಾರೆ.

"ಕ್ರೀಡಾಪಟು ಪಾಕಿಸ್ತಾನದವರಾಗಲಿ ಅಥವಾ ಯಾವುದೇ ದೇಶದವರಾಗಲಿ ಅವರು ತಮ್ಮ ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ. ಆತ ಮೊದಲು ಕ್ರೀಡಾಪಟು. ಅವರು ಪಾಕಿಸ್ತಾನದವರು ಎಂಬ ಕಾರಣಕ್ಕೆ ಅವರ ವಿರುದ್ಧ ಏನಾದರೂ ಹೇಳುವುದು ಸರಿಯಲ್ಲ. ಕ್ರೀಡಾಪಟುಗಳಿಗೆ ಗೌರವ ಇರಬೇಕು’’ ಎಂದು ಚೋಪ್ರಾ ಜಾವೆಲಿನ್ ನಲ್ಲಿ ಚಿನ್ನ ಗೆದ್ದ ದಿನವೇ  ಕುಸ್ತಿಯ 65 ಕೆಜಿ ತೂಕದ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಕುಸ್ತಿಪಟು ಬಜರಂಗ್ ‘The Indian Express’ ಗೆ ತಿಳಿಸಿದರು.

"ನಾನು ನೀರಜ್ ಅವರ ವೀಡಿಯೊವನ್ನು ನೋಡಿಲ್ಲ, ಆದರೆ ತಾರತಮ್ಯ ಮಾಡುವ ಬದಲು ಒಗ್ಗಟ್ಟಾಗಿ ಉಳಿಯುವುದು ಹೇಗೆ ಎಂದು ಕ್ರೀಡೆ ನಮಗೆ ಕಲಿಸುತ್ತದೆ. ನಾನು ರಷ್ಯಾ, ಅಮೆರಿಕದ ಕುಸ್ತಿಪಟುಗಳನ್ನು ಭೇಟಿಯಾದಾಗ, ಅದು ಯಾವಾಗಲೂ ತುಂಬಾ ಸೌಹಾರ್ದಯುತವಾಗಿರುತ್ತದೆ. ನಾವು ಪ್ರತಿಸ್ಪರ್ಧಿಗಳೆಂದು ಅನಿಸುವುದಿಲ್ಲ.  ನಾವೆಲ್ಲರೂ ಸಹೋದರರಂತೆ.  ಸ್ಪರ್ಧಾತ್ಮಕ ಮನೋಭಾವವು ಮ್ಯಾಟ್ ಮೇಲೆ ಮಾತ್ರ ಇರುತ್ತದೆ, ”ಎಂದು ಬಜರಂಗ್ ಹೇಳಿದರು.

ಚೋಪ್ರಾ ಹೇಳಿಕೆಗೆ ದೇಶದ ಕ್ರೀಡಾಪಟುಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್, ಟೇಬಲ್ ಟೆನಿಸ್ ಆಟಗಾರ ಶರದ್ ಕಮಲ್ ಈ ಘಟನೆಯು ನಮ್ಮನ್ನು ವಿಚಲಿತಗೊಳಿಸಿದೆ ಎಂದಿದ್ದಾರೆ.
"ಕ್ರೀಡಾಪಟುಗಳನ್ನು ವಿವಾದಕ್ಕೆ ಎಳೆದು ತರುವುದು ಹಾಗೂ ರಾಜಕೀಯ ಕಾರಣಕ್ಕೆ ಬಳಸುವುದು ಹಾಗೂ ದ್ವೇಷವನ್ನು ಹರಡುವುದನ್ನು  ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ.  ಭಾರತೀಯ ಅತ್ಲೀಟ್ ಗಳನ್ನು ಬೆಂಬಲಿಸಿ. ಮೈದಾನದೊಳಗಿನ ಎದುರಾಳಿ, ಮೈದಾನದ ಹೊರಗೂ ವೈರಿ ಆಗಿರುವುದಿಲ್ಲ ಎನ್ನುವುದನ್ನು ಕ್ರೀಡಾಭಿಮಾನಿಗಳು ಅರ್ಥಮಾಡಿಕೊಳ್ಳಬೇಕೆಂದು" ಸಾಕ್ಷಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News