ಇಸ್ರೇಲಿ ಸೇನೆಯ ಗುಂಡೇಟು ತಗಲಿದ್ದ 12 ವರ್ಷದ ಫೆಲೆಸ್ತೀನ್ ಬಾಲಕ ಮೃತ್ಯು

Update: 2021-08-28 17:47 GMT
photo : twitter/@Salma_Fareed_

ಕಾಬೂಲ್ ,ಆ.28: ಕಳೆದ ವಾರ ಗಾಝಾ-ಇಸ್ರೇಲ್ ಗಡಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಇಸ್ರೇಲಿ ಸೈನಿಕರಿಂದ ಹಣೆಗೆ ಗುಂಡೇಟು ತಗಲಿದ್ದ 12 ವರ್ಷದ ಫೆಲೆಸ್ತೀನ್ ಬಾಲಕನೊಬ್ಬ ಶನಿವಾರ ಮೃತಪಟ್ಟಿರುವುದಾಗಿ ಗಾಝಾದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈಜಿಪ್ಟ್ ಹಾಗೂ ಇಸ್ರೇಲ್ ತಮ್ಮ ಗಡಿಯಲ್ಲಿ ಹೇರಿರುವ ನಿರ್ಬಂಧಗಳನ್ನು ವಿರೋಧಿಸಿ ಹಮಸ್ ನೇತೃತ್ವದಲ್ಲಿ ಗಾಝಾದಲ್ಲಿ ಆಗಸ್ಟ್ 21ರಂದು ಫೆಲೆಸ್ತೀನಿಯರು ಬೃಹತ್ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಈ ಸಂದರ್ಭ ಸ್ಥಳದಲ್ಲಿದ್ದ 12 ವರ್ಷದ ಬಾಲಕ ಹಸ್ಸನ್ ಅಬು ಅಲ್ ನೀಲ್ ಗೆ ಇಸ್ರೇಲಿ ಸೈನಿಕನೊಬ್ಬ ಹಾರಿಸಿದ ಗುಂಡು ತಗಲಿ, ಆತ ಗಂಭೀರವಾಗಿ ಗಾಯಗೊಂಡಿದ್ದ.

 ಬುಧವಾರದಂದು ನಡೆದ ಪ್ರತಿಭಟನೆಯ ವೇಳೆ ಇಸ್ರೇಲಿ ಸೈನಿಕರ ಗುಂಡೆಸೆತದಿಂದ ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಫೆಲೆಸ್ತೀನ್ ನಾಗರಿಕ ಬುಧವಾರ ಕೊನೆಯುಸಿರೆಳೆದಿದ್ದ. ಆತನನ್ನು ಹಮಸ್ ಸೇನಾ ವಿಭಾಗದ ಸದಸ್ಯನೆಂದು ಗುರುತಿಸಲಾಗಿದೆ.

 ಇಸ್ರೇಲ್-ಗಾಝಾ ಗಡಿಯಲ್ಲಿ ಜನಸಂಚಾರಕ್ಕೆ ವಿಧಿಸಲಾಗಿರುವ ನಿರ್ಬಂಧವನ್ನು ಸಡಿಲಿಸಬೇಕೆಂದು ಆಗ್ರಹಿಸಿ ಬುಧವಾರವೂ ನೂರಾರು ಫೆಲೆಸ್ತೀನಿಯರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ನಡೆದ ಘರ್ಷಣೆಯಸಂದರ್ಭ ಪ್ರತಿಭಟನಕಾರನೆನನ್ನಲಾದ ವ್ಯಕ್ತಿಯೊಬ್ಬ ಅತ್ಯಂತ ಸನಿಹದಿಂದ ಇಸ್ರೇಲಿ ಸೈನಿಕನೊಬ್ಬನಿಗೆ ಗುಂಡು ಹಾರಿಸಿದ್ದು, ಆತನ ಪರಿಸ್ಥಿತಿಯೂ ಚಿಂತಾಜನಕವಾಗಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News