ಕೇರಳ: 5 ದಿನದಲ್ಲಿ 1.5 ಲಕ್ಷ ಕೋವಿಡ್ ಪ್ರಕರಣ

Update: 2021-08-29 05:58 GMT

ಹೊಸದಿಲ್ಲಿ, ಆ.29: ಕೇರಳದಲ್ಲಿ ಕಳೆದ ಐದು ದಿನಗಳಲ್ಲಿ ಸುಮಾರು 1.5 ಲಕ್ಷ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಸತತ ನಾಲ್ಕನೇ ದಿನ 30 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಶನಿವಾರ ದೇಶದಲ್ಲಿ 45 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.

46,783 ಹೊಸ ಪ್ರಕರಣಗಳು ದಾಖಲಾದ ಮರುದಿನ ಅಂದರೆ ಶನಿವಾರ ದೇಶಾದ್ಯಂತ 45,056 ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ ಒಟ್ಟು 31,265 ಹೊಸ ಪ್ರಕರಣಗಳು ವರದಿಯಾಗಿದ್ದು, ದೇಶದ ಒಟ್ಟು ಪ್ರಕರಣಗಳ ಪೈಕಿ ಶೇಕಡ 70ರಷ್ಟು (69.5%) ಪ್ರಕರಣಗಳು ಈ ರಾಜ್ಯದಲ್ಲಿ ಬೆಳಕಿಗೆ ಬಂದಿವೆ. ಶುಕ್ರವಾರ 19.22% ಇದ್ದ ಪಾಸಿಟಿವಿಟಿ ದರ ಅಲ್ಪ ಇಳಿಕೆ ಕಂಡು ಶನಿವಾರ 18.67% ಆಗಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶನಿವಾರ 2 ಲಕ್ಷದ ಗಡಿ ದಾಟಿದೆ. ದೇಶಾದ್ಯಂತ 3.7 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ದಕ್ಷಿಣ ರಾಜ್ಯಗಳ ಪಾಲು ಶೇಕಡ 55ರಷ್ಟಾಗಿದೆ. ಓಣಂ ಆರಂಭವಾಗಿ ಐದು ದಿನಗಳಿಂದೀಚೆಗೆ ಸೋಂಕು ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದ್ದು, 50 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಈ ಅವಧಿಯಲ್ಲಿ ಹೆಚ್ಚಿವೆ. ಈ ಅವಧಿಯಲ್ಲಿ ರಾಜ್ಯದಲ್ಲಿ 1,49,814 ಹೊಸ ಪ್ರಕರಣಗಳು ವರದಿಯಾಗಿವೆ.

ಉಳಿದಂತೆ ಮಹಾರಾಷ್ಟ್ರದಲ್ಲಿ 4,831 ಪ್ರಕರಣಗಳು ವರದಿಯಾಗಿದ್ದು, ಚಿಕ್ಕ ರಾಜ್ಯಗಳ ಪೈಕಿ ಮಿಝೋರಾಂನಲ್ಲಿ 888 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಆಗಸ್ಟ್ 10ರ ಬಳಿಕ ಗರಿಷ್ಠ ಸಂಖ್ಯೆಯಾಗಿದೆ. ಶನಿವಾರ ದೇಶದಲ್ಲಿ 444 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕೇರಳದಲ್ಲಿ 153, ಮಹಾರಾಷ್ಟ್ರದಲ್ಲಿ 126, ಒಡಿಶಾದಲ್ಲಿ 68, ತಮಿಳುನಾಡಿನಲ್ಲಿ 21 ಹಾಗೂ ಆಂಧ್ರ ಪ್ರದೇಶದಲ್ಲಿ 19 ಮಂದಿ ಜೀವ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News