ತಂದೆಯ ಸಾವಿನ ಬಳಿಕ ಬೀದಿಪಾಲಾಗಿದ್ದ ಬಾಲಕಿಯ ಸಾಮೂಹಿಕ ಅತ್ಯಾಚಾರ
ಮಹಾರಾಷ್ಟ್ರ, ಆ.29: ತಂದೆಯ ಸಾವಿನ ಬಳಿಕ ಬೀದಿಪಾಲಾಗಿದ್ದ ಹದಿನೇಳು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿ ಈ ಘಟನೆ ನಡೆದಿದ್ದು, ಈ ಸಾಮೂಹಿಕ ಅತ್ಯಾಚಾರಕ್ಕೆ ಹೊರತಾಗಿ ಆರೋಪಿಗಳು ಪ್ರತ್ಯೇಕವಾಗಿ 2020ರ ನವೆಂಬರ್‌ನಿಂದ ಈ ವರ್ಷದ ಆಗಸ್ಟ್‌ವರೆಗೆ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ತಾಯಿ ಮನೆಬಿಟ್ಟು ಹೋದ ಬಳಿಕ ಯುವತಿ ತಂದೆಯ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಕಳೆದ ವರ್ಷದ ನವೆಂಬರ್‌ನಲ್ಲಿ ತಂದೆ ಮೃತಪಟ್ಟ ಬಳಿಕ ಮನೆಯ ಮಾಲಕ ಮನೆ ತೆರವು ಮಾಡುವಂತೆ ಯುವತಿಗೆ ಸೂಚಿಸಿದ. ಇದರಿಂದಾಗಿ ಯುವತಿ ವಸಾಯಿಯ ಫುಟ್‌ಪಾತ್‌ನಲ್ಲಿ ವಾಸಿಸಬೇಕಾದ ಸ್ಥಿತಿ ನಿರ್ಮಾಣವಾಯಿತು ಎಂದು ರೈಲ್ವೆ ಡಿಸಿಪಿ ಪ್ರದೀಪ್ ಚವಾಣ್ ವಿವರಿಸಿದ್ದಾರೆ.
"ಆಗಸ್ಟ್ 3ರಂದು ಯುವತಿ ವಸಾಯಿ ರೈಲು ನಿಲ್ದಾಣ ಪ್ರದೇಶದಲ್ಲಿ ಅಡ್ಡಾಡುತ್ತಿದ್ದುದು ರೈಲ್ವೆ ಪೊಲೀಸರ ಗಮನಕ್ಕೆ ಬಂತು. ಆಕೆಯನ್ನು ವಿಚಾರಿಸಿದಾಗ, ಮಾನಸಿಕ ಆಘಾತದಿಂದಾಗಿ ಏನೂ ಹೇಳಲಾಗದ ಸ್ಥಿತಿಯಲ್ಲಿದ್ದಳು. ಪೊಲೀಸರು ಅಕೆಯಿಂದ ಮಾಹಿತಿ ಪಡೆಯಲು ಟಿಐಎಸ್‌ಎಸ್ ಆಸ್ಪತ್ರೆ ಮತ್ತು ಕೆಲ ಎನ್‌ಜಿಓಗಳ ನೆರವು ಪಡೆದರು. ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿದಾಗ ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆದದ್ದು ದೃಢಪಟ್ಟಿತು. ಆದರೆ ಆಕೆಗೆ ಅಜಯ್ ಎಂಬಾತನ ಹೆಸರು ಮಾತ್ರ ಗೊತ್ತಿದ್ದರಿಂದ ಅದರ ಆಧಾರದಲ್ಲಿ ಪೊಲೀಸರು ವಿಚಾರಣೆ ಆರಂಭಿಸಿದರು. ನಿಧಾನವಾಗಿ ಯುವತಿ ಘಟನೆಯ ವಿವರಗಳನ್ನು ನೀಡಿದಳು ಎಂದು ಹೇಳಲಾಗಿದೆ.
ಯುವತಿ ನೀಡಿದ ಮಾಹಿತಿ ಆಧಾರದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಜಯ್ ಕುಮಾರ್ ವಿನೋದ್ ಜೈಸ್ವಾಲ್ (34) ಎಂಬಾತನನ್ನು ಬಂಧಿಸಲಾಯಿತು. ಆತ ತಪ್ಪೊಪ್ಪಿಕೊಂಡು ಸಹಚರರಾದ ಮುನ್ನಾ ಯಾದವ್ (28) ಮತ್ತು ಅಕ್ರಮ್ ಚೌಧರಿ (34) ಅವರ ಬಗ್ಗೆ ವಿವರ ನೀಡಿದ ಎಂದು ಪೊಲೀಸರು ತಿಳಿಸಿದ್ದಾರೆ.