×
Ad

ಪ್ಯಾರಾಲಿಂಪಿಕ್ಸ್: ಐತಿಹಾಸಿಕ ಬೆಳ್ಳಿ ಜಯಿಸಿದ ಭವಿನಾಬೆನ್ ಪಟೇಲ್ ಗೆ ಅಭಿನಂದನೆಗಳ ಸುರಿಮಳೆ

Update: 2021-08-29 11:30 IST
photo: twitter

ಹೊಸದಿಲ್ಲಿ:ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್‌ನಲ್ಲಿ (ಕ್ಲಾಸ್ 4) ಬೆಳ್ಳಿ ಪದಕ ಜಯಿಸಿ ಇತಿಹಾಸ ನಿರ್ಮಿಸಿರುವ ಭವಿನಾಬೆನ್ ಪಟೇಲ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮಾಜಿ  ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ಹಲವು ಗಣ್ಯರಿಂದ ಅಭಿನಂದನೆಗಳ ಸುರಿಮಳೆಯಾಗಿದೆ.

 ಐತಿಹಾಸಿಕ ಸಾಧನೆ ಮಾಡಿರುವ ಪಟೇಲ್ ಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಅಭಿನಂದಿಸಿದರು. ಭವಿನಾಬೆನ್ ಪಟೇಲ್ ರವಿವಾರ ನಡೆದ ಫೈನಲ್‌ನಲ್ಲಿ ಚೀನಾದ ಯಿಂಗ್ ಝೌ ವಿರುದ್ಧ ಹೋರಾಡಿ ಸೋಲನುಭವಿಸಿದರು.

" ಭವಿನಾ ಪಟೇಲ್ ಇತಿಹಾಸವನ್ನು ಬರೆದಿದ್ದಾರೆ! ಅವರು ದೇಶಕ್ಕೆ  ಐತಿಹಾಸಿಕ ಬೆಳ್ಳಿ ಪದಕವನ್ನು ತಂದಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. "ಭವಿನಾ ಜೀವನ ಪಯಣವು ಪ್ರೇರಕವಾಗಿದೆ  ಹಾಗೂ  ಹೆಚ್ಚಿನ ಯುವಕರನ್ನು ಕ್ರೀಡೆಗಳತ್ತ ಸೆಳೆಯುತ್ತದೆ" ಎಂದು ಅವರು ಹೇಳಿದರು.

ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷೆ ದೀಪಾ ಮಲಿಕ್  ಅವರು ಭವಿನಾಬೆನ್ ಅವರನ್ನು ಅಭಿನಂದಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಭವಿನಾಬೆನ್ ಪಟೇಲ್ ಅವರಿಗೆ ಎಲ್ಲಾ ಕಡೆಯಿಂದಲೂ ಅಭಿನಂದನೆಗಳು ಹರಿದು ಬಂದವು.

"ಭವಿನಾ ಪಟೇಲ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತೀಯ ತಂಡ ಹಾಗೂ ಕ್ರೀಡಾ ಪ್ರೇಮಿಗಳಿಗೆ ಸ್ಫೂರ್ತಿ ನೀಡಿದ್ದಾರೆ. ನಿಮ್ಮ ಅಸಾಧಾರಣ ನಿರ್ಣಯ ಹಾಗೂ  ಕೌಶಲ್ಯಗಳು ಭಾರತಕ್ಕೆ ಕೀರ್ತಿ ತಂದಿದೆ. ಈ ಅಸಾಧಾರಣ ಸಾಧನೆಗೆ ನಿಮಗೆ ನನ್ನ ಅಭಿನಂದನೆಗಳು" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

" #ಸಿಲ್ವರ್ ಗೆದ್ದ ಭವಿನಾ ಪಟೇಲ್ ಅವರಿಗೆ ಅಭಿನಂದನೆಗಳು. ನಿಮ್ಮ ಸಾಧನೆಯನ್ನು ಭಾರತ ಶ್ಲಾಘಿಸುತ್ತದೆ. ನೀವು ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದೀರಿ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

"ಈಗ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಪರ ಮೊದಲ ಬಾರಿ ಮೊದಲ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಭವಿನಾಪಟೇಲ್ ಅವರಿಗೆ ಅಭಿನಂದನೆಗಳು" ಎಂದು ಭಾರತದ ಮಾಜಿ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. "ಏಕಾಗ್ರತೆ, ಕಠಿಣ ಪರಿಶ್ರಮ ಹಾಗೂ  ಮಾನಸಿಕ ಶಕ್ತಿಯ ಅದ್ಭುತ ಪ್ರದರ್ಶನ" ಎಂದು ಸೆಹ್ವಾಗ್ ಹೇಳಿದರು.

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಬಾರಿ ಪದಕವನ್ನು ಗೆದ್ದುಕೊಟ್ಟಿರುವ ಭವಿನಾ ಪಟೇಲ್ ಗೆ ಅಭಿನಂದನೆಗಳು. ಭಾರತವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದೆ ಎಂದು ಮಾಜಿ ಕ್ರಿಕೆಟಿಗ ವಸೀಂ ಜಾಫರ್ ಟ್ವೀಟಿಸಿದ್ದಾರೆ.

ಭವಿನಾ ರವಿವಾರ ನಡೆದ ಟೇಬಲ್ ಟೆನಿಸ್ ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ಚೀನಾದ ಝೌ ವಿರುದ್ಧ 7-11, 5-11, 6-11 ಗೇಮ್ ಗಳ ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News