ಅತ್ಯಾಚಾರ ಆರೋಪಿಗೆ ನೀಡಿದ ಜಾಮೀನನ್ನು ಮರುಪರಿಶೀಲಿಸಲು ಗುವಾಹಟಿ ಹೈಕೋರ್ಟ್‌ ಗೆ ಐಐಟಿ ವಿದ್ಯಾರ್ಥಿಗಳ ಮನವಿ

Update: 2021-08-29 07:59 GMT
Photo: iitg website

ಹೊಸದಿಲ್ಲಿ: ಅತ್ಯಾಚಾರ ಆರೋಪಿ ವಿದ್ಯಾರ್ಥಿಗೆ ಗುವಾಹಟಿ ಹೈಕೋರ್ಟ್ ಜಾಮೀನು ನೀಡಿರುವುದಕ್ಕೆ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ವಿವಿಧ ಐಐಟಿಗಳ (ಭಾರತೀಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಹಳೆಯ ವಿದ್ಯಾರ್ಥಿಗಳು ಸಾರ್ವಜನಿಕ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೇಳಿಕೆಯ ಸಹಿ ಹಾಕಿದವರು, "ನ್ಯಾಯಾಲಯಗಳ ಇಂತಹ ದೃಷ್ಟಿಕೋನವು ನ್ಯಾಯಾಲಯದಿಂದ ನ್ಯಾಯಕ್ಕಾಗಿ ಕಾಯುತ್ತಿರುವ ಅನೇಕರ ಭರವಸೆಯನ್ನು ತೆಗೆದುಹಾಕಬಹುದು ಮತ್ತು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗಳನ್ನು ಅಸುರಕ್ಷಿತ ವಾತಾವರಣವಾಗಿಸಬಹುದು" ಎಂದು ಹೇಳಿದರು. ಆರೋಪಿಗಳಿಗೆ ಜಾಮೀನು ನೀಡಲು ನಿರ್ದಿಷ್ಟವಾದ ಆಧಾರವನ್ನು "ಮರುಪರಿಶೀಲಿಸಬೇಕು" ಎಂದು ಅವರು ಆಗ್ರಹಿಸಿದರು.

ನಾವು, ಐಐಟಿ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಗುವಾಹಟಿಯಿಂದ ವರದಿಯಾದ ಇತ್ತೀಚಿನ ಬೆಳವಣಿಗೆಯಲ್ಲಿ ನಮಗಿರುವ ನಿರಾಶೆ, ಅಸಮಾಧಾನ ಹಾಗೂ ಈ ವಿಚಾರದ ಕುರಿತಾದಂತೆ ಇರುವ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಲು ಈ ಹೇಳಿಕೆ ಪ್ರಕಟಿಸುತ್ತಿದ್ದೇವೆ ಎಂದು ಅವರು ಉಲ್ಲೇಖಿಸಿದ್ದಾರೆ. ತೀರ್ಪು ನೀಡಿದ್ದ ನ್ಯಾಯಾಧೀಶರಾದ ನ್ಯಾಯಮೂರ್ತಿ ಬೋರ್ತಕೂರ್‌ ಅವರು ವಿಚಾರಣೆಯ ವೇಳೆ ಆರೋಪಿ ವಿರುದ್ಧ ಮೇಲ್ನೋಟಕ್ಕೆ ಸ್ಪಷ್ಟವಾದ ಪ್ರಕರಣಗಳಿವೆ ಎಂದು ಹೇಳಿಕೆ ನೀಡಿದ್ದರು.

ಅಂತಹ ತೀರ್ಪು "ಲಿಂಗ ಸಮಾನತೆ ಮತ್ತು ನ್ಯಾಯದ ಮೂಲಕ ದೇಶವು ಪ್ರಗತಿ ಸಾಧಿಸಿದೆ ಎಂಬ ಕಲ್ಪನೆಗೆ ಧಕ್ಕೆ ತರುವ ಅತ್ಯಂತ ದುಃಖಕರ ಬೆಳವಣಿಗೆಯಾಗಿದೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪಿಗಳಿಗೆ ನೀಡಿದಂತಹ "ರಿಯಾಯಿತಿಗಳು" ಅಪರಾಧಗಳ ಮೇಲಿನ ಭಯವನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ ಮತ್ತು "ಈ ಕೃತ್ಯಗಳಿಂದ ತಪ್ಪಿಸಿಕೊಳ್ಳಬಹುದು ಮತ್ತು ಅವರ 'ಉಜ್ವಲ ಭವಿಷ್ಯ' ವನ್ನೂ ನಿರ್ಮಿಸಬಹುದು ಎಂಬ ಕಲ್ಪನೆಯನ್ನು ಬಲಪಡಿಸುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

"ಯಾವುದೇ ರೀತಿಯ ಪ್ರತಿಭೆ, ಬುದ್ಧಿಶಕ್ತಿ ಅಥವಾ ಖ್ಯಾತಿಯು ಆರೋಪಿಯನ್ನು ಕಾನೂನು ಕ್ರಮಗಳಿಂದ ರಕ್ಷಿಸಬಾರದು. ಅತ್ಯಾಚಾರದಂತಹ ಘೋರ ಅಪರಾಧಗಳ ಪ್ರಕರಣಗಳಲ್ಲಿ  ಪರಿಹಾರಕ್ಕೆ ಇವು ಕಾರಣಗಳಾಗಿರಬಾರದು, ”ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಹ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ ಆರೋಪವಿದ್ದ ಐಐಟಿ ವಿದ್ಯಾರ್ಥಿಯೋರ್ವನನ್ನು ಗುವಾಹಟಿ ಹೈಕೋರ್ಟ್‌ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು. "ಅವರಿಬ್ಬರೂ ಭವಿಷ್ಯದ ಆಸ್ತಿ" ಎಂದು ಬಣ್ಣಿಸಿತ್ತು. ಮಾರ್ಚ್‌ 28ರಂದು ಆರೋಪಿಯು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ್ದು, ಮರುದಿನ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿಯನ್ನು ಎಪ್ರಿಲ್‌ 3ರಂದು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News