ದ.ಕ. ಜಿಲ್ಲೆಯಲ್ಲಿ ‘ವೀಕೆಂಡ್ ಕರ್ಫ್ಯೂ’ ನೀರಸ ಸ್ಪಂದನೆ
ಮಂಗಳೂರು, ಆ.29: ಕೋವಿಡ್ -19 ಸೋಂಕಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ರವಿವಾರದ ‘ವಾರಾಂತ್ಯ ಕರ್ಫ್ಯೂ’ಗೆ ದ.ಕ.ಜಿಲ್ಲೆಯಲ್ಲಿ ನೀರಸ ಸ್ಪಂದನ ವ್ಯಕ್ತವಾಗಿದೆ. ನಗರ ಪ್ರದೇಶದಲ್ಲಿ ಮಧ್ಯಾಹ್ನ 2ರ ಬಳಿಕ ಅಂಗಡಿಗಳಿಗೆ ವ್ಯಾಪಾರಿಗಳು ಬಾಗಿಲೆಳೆದರೆ, ಗ್ರಾಮೀಣ ಭಾಗದ ಕೆಲವು ಕಡೆ ಎಂದಿನಂತೆ ಕಾರ್ಯಾಚರಿಸುತ್ತಿದ್ದುದು ಕಂಡು ಬಂತು.
ಶನಿವಾರದಂತೆ ರವಿವಾರ ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 2ರವರೆಗೆ ದಿನಬಳಕೆಯ ವಸ್ತುಗಳ ಖರೀದಿ ಸಹಿತ ವಾಹನಗಳ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ದಿನಸಿ, ತರಕಾರಿ, ಹಾಲು, ಮಾಂಸ, ಮೀನು ಮಾರುಕಟ್ಟೆ, ಅಂಗಡಿಗಳು ಕೂಡ ನಿಗದಿತ ಸಮಯ ದವರೆಗೆ ವ್ಯವಹಾರ ನಡೆಸಿದ್ದವು.
ಮಧ್ಯಾಹ್ನದ ಬಳಿಕ ಪ್ರಯಾಣಿಕರ ಕೊರತೆಯಿಂದ ಬೆರಳೆಣಿಕೆಯ ಸರಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ಮಾತ್ರ ಕಂಡು ಬಂದಿತ್ತು. ಆದರೆ ನಗರದಲ್ಲಿ ಖಾಸಗಿ ವಾಹನಗಳು, ರಿಕ್ಷಾಗಳು ಭಾಗಶಃ ಸಂಚರಿಸುತ್ತಿತ್ತು. ಆದಾಗ್ಯೂ ನಗರದ ಪಂಪ್‌ವೆಲ್, ವೆಲೆನ್ಸಿಯಾ, ಕೊಟ್ಟಾರ, ಕ್ಲಾಕ್ ಟವರ್ ಸಹಿತ ಆಯಾ ಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸಿದರು.
ಸೋಮವಾರ ಮುಂಜಾನೆ 5ರವರೆಗೆ ‘ವೀಕೆಂಡ್ ಕರ್ಫ್ಯೂ’ ಜಾರಿಯಲ್ಲಿರಲಿದ್ದು, ಬಳಿಕ ವಾಹನಗಳ ಓಡಾಟ, ಅಂಗಡಿ ಮುಂಗಟ್ಟುಗಳ ಸಹಿತ ಎಲ್ಲವೂ ಯಥಾಸ್ಥಿತಿಗೆ ಮರಳಲು ಜಿಲ್ಲಾಡಳಿತ ಅವಕಾಶ ನೀಡಿದೆ.