ರೈತರ ತಲೆ ಒಡೆಯಲು ಹೇಳಿದ್ದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು: ಹರ್ಯಾಣ ಉಪಮುಖ್ಯಮಂತ್ರಿ
ಹೊಸದಿಲ್ಲಿ: ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರ ತಲೆಯನ್ನು ಒಡೆಯಿರಿ ಎಂದು ಪೊಲೀಸರಿಗೆ ಆದೇಶ ನೀಡಿದ್ದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹರ್ಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲ ಹೇಳಿಕೆ ನೀಡಿದ್ದಾರೆ.
ಕರ್ನಾಲ್ ಉಪವಿಭಾಗಾಧಿಕಾರಿಯಾಗಿರುವ ಆಯುಷ್ ಸಿನ್ಹಾ ಎಂಬಾತ ಬಿಜೆಪಿ ನಾಯಕರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ತಲೆಗೆ ಗಾಯವಾಗುವಂತೆ ಹೊಡೆಯಬೇಕೆಂದು ಪೊಲೀಸರಿಗೆ ಸೂಚನೆ ನೀಡುವ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿತ್ತು. ಈ ಕುರಿತು ಬಿಜೆಪಿ ಸಂಸದ ವರುಣ್ ಗಾಂಧಿ ಸಹಿತ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
"2018ರ ಬ್ಯಾಚ್ ನ ಐಎಎಸ್ ಅಧಿಕಾರಿಯ ವೀಡಿಯೋ ವೈರಲ್ ಆಗಿದೆ. ಅವರು ತಾನು ಎರಡು ದಿನಗಳಿಂದ ನಿದ್ದೆ ಮಾಡಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ರೈತರು 365 ದಿನಗಳಿಂದ ನಿದ್ದೆ ಮಾಡಿಲ್ಲ ಎನ್ನುವುದನ್ನು ಅವರು ಗಮನಿಸಬೇಕು. ಅವರ ತರಬೇತಿ ಸಮಯದಲ್ಲಿ ಅಧಿಕಾರಿಗಳು ಸೂಕ್ಷ್ಮವಾಗಿರುವ ಕುರಿತು ಕೂಡಾ ತರಬೇತಿ ನೀಡಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಚೌಟಾಲ ಹೇಳಿದ್ದಾರೆ.