×
Ad

ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ

Update: 2021-08-29 18:05 IST

ಮಂಗಳೂರು, ಆ.29: ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ನಗರ ಸಹಿತ ಜಿಲ್ಲೆಯ ವಿವಿಧೆಡೆ ಭರದ ಸಿದ್ಧತೆ ನಡೆದಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಸರಳ ಆಚರಣೆಗೆ ಸರಕಾರ ಸೂಚಿಸಿರುವುದರಿಂದ ಸೋಮವಾರ ಸರಳವಾಗಿ ಹಬ್ಬ ಆಚರಿಸಲಾಗುತ್ತದೆ.

ಸಂಭ್ರಮದ ಆಚರಣೆ ಅವಕಾಶವಿಲ್ಲದ ಕಾರಣ ದೇವಳಗಳಲ್ಲೂ ಸರಳ ಆಚರಣೆ ನಡೆಯಲಿದೆ. ಆದರೆ ಮನೆಯಲ್ಲಿ ಹಬ್ಬದ ಆಚರಣೆಗೆ ಯಾವುದೇ ಅಡ್ಡಿ ಇಲ್ಲದಿರುವುದರಿಂದ ಮಾರುಕಟ್ಟೆಯಲ್ಲಿ ರವಿವಾರ ಖರೀದಿಯ ಭರಾಟೆ ಬಿರುಸಿನಿಂದ ಕೂಡಿತ್ತು.

ನಗರದ ನಂತೂರು, ಕುಡುಪು, ಆರ್ಯಸಮಾಜ ರಸ್ತೆಯ ಇಸ್ಕಾನ್ ಮಂದಿರಗಳಲ್ಲಿ ಶ್ರೀಕೃಷ್ಟನ ಜನ್ಮಾಷ್ಟಮಿಗೆ ಸಿದ್ಧತೆ ಮಾಡಲಾಗಿದೆ. ಆದರೆ ಸಾರ್ವಜನಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವಕಾಶ ಇಲ್ಲದಿರುವುದರಿಂದ ಆನ್‌ಲೈನ್ ಮೂಲಕ ನೇರ ಪ್ರಸಾರ ಇರಲಿದೆ. ಅಷ್ಟಮಿಯ ಹಿನ್ನೆಲೆಯಲ್ಲಿ ಸಂಘ ಸಂಸ್ಥೆಗಳು, ಭಜನಾ ಮಂದಿರಗಳ ವತಿಯಿಂದ ಆಯೋಜಿಸಲಾಗುತ್ತಿದ್ದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಭಜನಾ ಮಂದಿರಗಳಲ್ಲಿ ರಾತ್ರಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾತ್ರ ನೆರವೇರಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಸಂಭ್ರಮದಿಂದ ಯೋಜಿಸಲಾಗುತ್ತಿದ್ದ ರಾಷ್ಟ್ರೀಯ ಮಕ್ಕಳ ಉತ್ಸವ ಕೃಷ್ಣ ವೇಷ ಸ್ಪರ್ಧೆಯೂ ಕಳೆದ ಬಾರಿ ಯಂತೆ ಈ ವರ್ಷವೂ ಆನ್‌ಲೈನ್‌ನಲ್ಲಿ ನಡೆಯಲಿದೆ.

ವಾರಾಂತ್ಯ ಕರ್ಫ್ಯೂವಿನ ಮಧ್ಯೆಯೂ ರವಿವಾರ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಮಧ್ಯಾಹ್ನದವರೆಗೆ ತರಕಾರಿ, ಹೂವು, ಹಣ್ಣು ಖರೀದಿಗೆ ಜನರು ಮುಗಿ ಬಿದ್ದಿದ್ದರು. ಹೊರ ಜಿಲ್ಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಹೂವಿನ ವ್ಯಾಪಾರಿಗಳೂ ಆಗಮಿಸಿದ್ದರು. ನಗರವಲ್ಲದೆ ಹೊರವಲಯದ ತೊಕ್ಕೊಟ್ಟು, ಸುರತ್ಕಲ್, ಬಜ್ಪೆ ಮತ್ತಿತರ ಕಡೆ ರಸ್ತೆ ಬದಿಗಳಲ್ಲಿ ಬಿರುಸಿನ ವ್ಯಾಪಾರ ನಡೆಸುತ್ತಿದ್ದುದು ಕಂಡು ಬಂತು.

ಮೂಡೆ ಎಲೆಗಳೂ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಲಭ್ಯವಿದ್ದ ಕಾರಣ ಬೆಲೆಯಲ್ಲಿ ತುಸು ಏರಿಕೆಯಾಗಿತ್ತು. 100 ರೂ.ಗೆ ದೊಡ್ಡ ಗಾತ್ರದ 4 ಮತ್ತು ಸಣ್ಣ ಗಾತ್ರದ 6 ಮೂಡೆಗಳು ಮಾರಾಟ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News