ಮಥುರಾ: ಹಿಂದುತ್ವ ದಾಂಧಲೆಯ ಬಳಿಕ ತನ್ನ ʼಶ್ರೀನಾಥ್‌ʼ ಹೆಸರಿನ ಅಂಗಡಿಯನ್ನು ‘ಅಮೆರಿಕನ್ ದೋಸಾ’ಕ್ಕೆ ಬದಲಿಸಿದ ವ್ಯಕ್ತಿ

Update: 2021-08-29 15:05 GMT
ಫೋಟೊ ಕೃಪೆ: ThePrint

ಮಥುರಾ(ಉ.ಪ್ರ.),ಆ.29: ಮುಸ್ಲಿಂ ಕುಟುಂಬವೊಂದು ಹಿಂದು ದೇವರ ಹೆಸರನ್ನು ಬಳಸಿಕೊಂಡಿದೆ ಎಂದು ಆಕ್ಷೇಪಿಸಿ ಹಿಂದುತ್ವ ಗುಂಪುಗಳು ದಾಂಧಲೆ ನಡೆಸಿದ ಬಳಿಕ ಇಲ್ಲಿಯ ವಿಕಾಸ ಮಾರ್ಕೆಟ್ನಲ್ಲಿರುವ ಜನಪ್ರಿಯ ದೋಸಾ ಅಂಗಡಿಯು ತನ್ನ ಹೆಸರನ್ನು ‘ಶ್ರೀನಾಥ ದೋಸಾ’ದಿಂದ ‘ಅಮೆರಿಕನ್ ದೋಸಾ ಕಾರ್ನರ್ ’ಎಂದು ಬದಲಿಸಿಕೊಂಡಿದೆ.

ಆ.18ರಂದು ನಡೆದಿದ್ದ ಈ ಘಟನೆಯು ಈ ವಾರ ದಾಂಧಲೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಬಹಿರಂಗಗೊಂಡಿದೆ. ‘ಕೃಷ್ಣ ಭಕ್ತರೇ ಯುದ್ಧವನ್ನು ಮಾಡಿ,ಈಗ ಮಥುರಾವನ್ನೂ ಶುದ್ಧಗೊಳಿಸಿ ’ಎಂದು ಅಂಗಡಿಯ ಹೊರಗೆ ನೆರೆದಿದ್ದ ಗುಂಪು ಕೂಗುತ್ತಿದ್ದುದು ವೀಡಿಯೊದಲ್ಲಿ ಕಂಡುಬಂದಿದೆ.

ಘಟನೆ ನಡೆದ 10 ದಿನಗಳ ಬಳಿಕ ಅಂಗಡಿಯ ಮಾಲಿಕ ಇರ್ಫಾನ್ ಅಂಗಡಿಗೆ ನಷ್ಟವನ್ನುಂಟು ಮಾಡಿರುವ ಮತ್ತು ಜೀವ ಬೆದರಿಕೆಯನ್ನು ಒಡ್ಡಿರುವ ಬಗ್ಗೆ ಪೊಲೀಸ್ ದೂರನ್ನು ದಾಖಲಿಸಿದ್ದಾರೆ.

‘ಶ್ರೀನಾಥಜಿ ಸೌಥ್ ಇಂಡಿಯನ್ ದೋಸಾ ಕಾರ್ನರ್’ ಹೆಸರಿನಲ್ಲಿ ಇತ್ತೀಚಿಗಷ್ಟೇ ವಿಕಾಸ ಮಾರ್ಕೆಟ್ ನಲ್ಲಿ ಅಂಗಡಿಯನ್ನು ಆರಂಭಿಸಿರುವ ಪವನ್ ಯಾದವ್ ಹಿಂದುತ್ವ ಗುಂಪುಗಳಿಗೆ ಮಾಹಿತಿ ನೀಡಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಸ್ಲಿಂ ಕುಟುಂಬವು ನಡೆಸುತ್ತಿರುವ ದೋಸಾ ಅಂಗಡಿಯು ಜನಪ್ರಿಯವಾಗಿದೆ. ಹಿಂದುಗಳ ಅಂಗಡಿಗಿಂತ ಅಲ್ಲಿ ದೋಸೆಯು ಅಗ್ಗವಾಗಿದೆ. ಹೀಗಾಗಿ ಯಾದವ್ ಅದನ್ನು ಮುಚ್ಚಿಸಲು ಬಯಸಿದ್ದ ಎಂದೂ ಪೊಲೀಸರು ಹೇಳಿದರು.

ತಮ್ಮ ಅಂಗಡಿಯು ಧ್ವಂಸಗೊಳ್ಳಲು ಯಾದವ್ ಕಾರಣವೆಂದು ಆರೋಪಿಸಿರುವ ಇರ್ಫಾನ್ ಸೋದರ ಅವೇದ್,‘ನಾವು ಸೋದರರು ಐದು ವರ್ಷಗಳಿಂದಲೂ ಯಾವುದೇ ಸಮಸ್ಯೆಯಿಲ್ಲದೆ ಅಂಗಡಿಯನ್ನು ನಡೆಸುತ್ತಿದ್ದೇವೆ. ಆದರೆ ಕಳೆದ ಎರಡೂವರೆ ತಿಂಗಳುಗಳಿಂದ ಇಲ್ಲಿ ಅಂಗಡಿಯನ್ನು ಆರಂಭಿಸಿರುವ ಯಾದವನಿಂದಾಗಿ ತೊಂದರೆಯನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು. ಈ ಆರೋಪವನ್ನು ತಳ್ಳಿಹಾಕಿರುವ ಯಾದವ,ಮುಸ್ಲಿಂ ಕುಟುಂಬದ ಅಂಗಡಿಯಲ್ಲಿ ದಾಂಧಲೆ ನಡೆದಿರುವುದು ತನಗೆ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ. ಪರಸ್ಪರ ಕೇವಲ 25 ಮೀ.ದೂರದಲ್ಲಿ ಇವೆರಡೂ ದೋಸಾ ಅಂಗಡಿಗಳಿವೆ.

ದಾಂಧಲೆಯ ಹೊಣೆಯನ್ನು ವಹಿಸಿಕೊಂಡಿರುವ 2017ರಲ್ಲಿ ವಿಹಿಂಪನಿಂದ ಬೇರ್ಪಟ್ಟು ಅಸ್ತಿತ್ವಕ್ಕೆ ಬಂದ ಅಂತರರಾಷ್ಟ್ರೀಯ ಹಿಂದು ಪರಿಷದ್ (ಎಎಚ್ಪಿ)ನ ಮಥುರಾ ನಗರಾಧ್ಯಕ್ಷ ಶ್ರೀಕಾಂತ ಶರ್ಮಾ, ಇದು ‘ಆರ್ಥಿಕ ಜಿಹಾದ್’ಆಗಿದೆ ಮತ್ತು ನಾವು ಇನ್ನು ಮುಂದೆ ಇದನ್ನು ಸಹಿಸುವುದಿಲ್ಲ ಎಂದು ಹೇಳಿದರು.

ತಾವು ಐದು ವರ್ಷಗಳ ಹಿಂದೆ ಅಂಗಡಿಯನ್ನು ಖರೀದಿಸಿದ್ದೆವು. ಆದರೆ ಸಮಸ್ಯೆಗಳು ಎದುರಾಗಿದ್ದರಿಂದ ಎರಡು ತಿಂಗಳುಗಳ ಹಿಂದೆ ದಿನಕ್ಕೆ 400 ರೂ.ಗಳ ಬಾಡಿಗೆ ಆಧಾರದಲ್ಲಿ ನಡೆಸಲು ಅಂಗಡಿಯನ್ನು ರಾಹುಲ್ ಠಾಕೂರ್ ಎಂಬಾತನಿಗೆ ನೀಡಿದ್ದೇವೆ ಎಂದು ಇರ್ಫಾನ್ ದೂರಿನಲ್ಲಿ ತಿಳಿಸಿದ್ದಾರೆ.
 
‘ಯಾರನ್ನೂ ದಾರಿ ತಪ್ಪಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಇದು ಮಥುರಾ, ಕೃಷ್ಣನಗರಿ. ಕೃಷ್ಣ ನಮ್ಮ ಗುರುತು.ನೋಡಿ,ಇಲ್ಲಿ ಎಲ್ಲಿ ನೋಡಿದರೂ ಅಂಗಡಿಗಳಿಗೆ ಕೃಷ್ಣನ ಹೆಸರುಗಳೇ ಇವೆೆ. ನಾವು ಐದು ವರ್ಷಗಳ ಹಿಂದೆ ಅಂಗಡಿಯನ್ನು ಖರೀದಿಸಿದಾಗ ಇದ್ದ ‘ಶ್ರೀನಾಥ್ ದೋಸಾ’ಹೆಸರನ್ನೇ ನಾವು ಮುಂದುವರಿಸಿದ್ದೇವೆ ’ ಎಂದು ಅವೇದ್ ಹೇಳಿದರು.

‘ಎಎಚ್ಪಿ ಇಂತಹ ಕ್ರಮಗಳನ್ನು ಮುಂದುವರಿಸಲಿದೆ, ಆದರೆ ಕಾನೂನು ಮೀರುವುದಿಲ್ಲ. ಮುಸ್ಲಿಮರು ತಮ್ಮ ವ್ಯವಹಾರಗಳಿಗೆ ಹಿಂದು ದೇವರ ಹೆಸರುಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಅವರು ಹಾಗೆ ಬಯಸುತ್ತಿದ್ದರೆ ಮೊದಲು ‘ಘರ್ ವಾಪ್ಸಿ ’ಆಗಬೇಕು. ಹಾಗೆ ಮಾಡಿದರೆ ಅವರಿಗೆ ಅಂಗಡಿಯನ್ನೂ ನಾವೇ ಕೊಡಿಸುತ್ತೇವೆ ’ಎಂದು ಶರ್ಮಾ ಹೇಳಿದರು.

ಕೃಪೆ: theprint.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News