×
Ad

ಉಡುಪಿ: ಸೋಮವಾರ ಲಸಿಕಾ ಮಹಾಮೇಳ; 50,000 ಡೋಸ್ ಲಭ್ಯ

Update: 2021-08-29 20:31 IST

ಉಡುಪಿ, ಆ.29: ಉಡುಪಿ ಜಿಲ್ಲೆಯಲ್ಲಿ ಆ.30ರ ಸೋಮವಾರ ಮತ್ತೆ ಕೋವಿಡ್-19 ಲಸಿಕಾ ಮಹಾಮೇಳ ನಡೆಯಲಿದೆ. ಈ ದಿನ ಜಿಲ್ಲೆಯ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ನೀಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 50,000 ಲಸಿಕೆ ಲಭ್ಯವಿದ್ದು, ಮೊದಲ ಮತ್ತು ಎರಡನೇ ಡೋಸ್ ಕೋವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಪ್ರಥಮ ಹಾಗೂ ಕೋವಿಶೀಲ್ಡ್ ಪ್ರಥಮ ಡೋಸ್ ಲಸಿಕೆ ಪಡೆದು 84 ದಿನ ಮೀರಿದವರಿಗೆ ಎರಡನೇ ಹಾಗೂ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು 28 ದಿನ ಮೀರಿದವರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿರಲಿದೆ. ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ 4060, ಸಾರ್ವಜನಿಕ ಆಸ್ಪತ್ರೆ ಕಾರ್ಕಳದಲ್ಲಿ 1540, ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರದಲ್ಲಿ 1380, ಕಾಪುವಿನಲ್ಲಿ 1050, ಕೆಮ್ಮಣ್ಣುನಲ್ಲಿ 1500, ಮಲ್ಪೆಯಲ್ಲಿ 1090, ಪಡುಬಿದ್ರಿ 1500, ಸಾಸ್ತಾನದಲ್ಲಿ 1000 ಡೋಸ್ ಲಸಿಕೆ ಲಭ್ಯವಿರಲಿದೆ.

ಬೈಂದೂರಿನಲ್ಲಿ 1230, ಹಾಲಾಡಿ 990, ಗಂಗೊಳ್ಳಿ 820, ಕಿರಿಮಂಜೇಶ್ವರ 1060, ಸಿದ್ಧಾಪುರ 1100, ಮರವಂತೆ 870, ಹೆಬ್ರಿ 990, ನಿಟ್ಟೆ 970 ಡೋಸ್ ಲಭ್ಯವಿದ್ದರೆ ಉಳಿದೆಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 200ರಿಂದ 800ರಷ್ಟು ಡೋಸ್ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಅದೇ ರೀತಿ ಉಡುಪಿ ನಗರಸಭಾ ವ್ಯಾಪ್ತಿಯ ಲಸಿಕಾ ಕೇಂದ್ರಗಳಲ್ಲೂ ಲಸಿಕೆ ಲಭ್ಯವಿರಲಿದೆ ಎಂದೂ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News