ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿಪದಕ ಗೆದ್ದ ಭಾವಿನಾ ಪಟೇಲ್ ಗೆ ಮೂರು ಕೋಟಿ ರೂ.ಬಹುಮಾನ ಘೋಷಿಸಿದ ಗುಜರಾತ್ ಸರಕಾರ

Update: 2021-08-29 16:50 GMT

ಅಹ್ಮದಾಬಾದ್, ಆ.29: ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡೆಗಳಲ್ಲಿ ಬೆಳ್ಳಿಯ ಪದಕವನ್ನು ಗೆದ್ದಿರುವ ಟೇಬಲ್ ಟೆನಿಸ್ ಪಟು ಭಾವಿನಾ ಪಟೇಲ್ ಅವರಿಗೆ ಗುಜರಾತ್ ಸರಕಾರವು ಮೂರು ಕೋ.ರೂ.ಗಳ ನಗದು ಬಹುಮಾನವನ್ನು ಘೋಷಿಸಿದೆ. ಪಟೇಲ್ ಗುಜರಾತಿನ ಮೆಹ್ಸಾನಾ ಜಿಲ್ಲೆಯ ಸುಂಧಿಯಾ ಗ್ರಾಮದವರಾಗಿದ್ದಾರೆ.‌

ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ ನಲ್ಲಿ ಭಾಗವಹಿಸಿದ್ದ ಪಟೇಲ್ ರವಿವಾರ ನಡೆದ ಅಂತಿಮ ಪಂದ್ಯದಲ್ಲಿ ಚೀನಾದ ಯಿಂಗ್ ಝೌ ಅವರಿಂದ 0-3 ಅಂತರದಲ್ಲಿ ಸೋಲು ಕಂಡು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. 12 ತಿಂಗಳ ಮಗುವಾಗಿದ್ದಾಗಲೇ ಪೋಲಿಯೊ ಪೀಡಿತರಾಗಿದ್ದ ಅವರು ಶನಿವಾರ ಸೆಮಿಫೈನಲ್ ನಲ್ಲಿ ವಿಶ್ವದ ನಂ.3 ಚೀನಾದ ಮಿಯಾವೊ ಝಾಂಗ್ ವಿರುದ್ಧ ಗೆಲುವು ಸಾಧಿಸಿದ್ದರು.

‘ಪ್ಯಾರಾಲಿಂಪಿಕ್ ಕ್ರೀಡೆಗಳಲ್ಲಿ ಟೇಬಲ್ ಟೆನಿಸ್ ನಲ್ಲಿ ತನ್ನ ಅಸಾಧಾರಣ ಸಾಧನೆಗಳಿಂದ ದೇಶಕ್ಕೆ ಹೆಮ್ಮೆಯನ್ನು ತಂದಿರುವ ಮೆಹ್ಸಾನಾ ಜಿಲ್ಲೆಯ ಪುತ್ರಿ ಭಾವಿನಾ ಪಟೇಲ್ ರನ್ನು ಮುಖ್ಯಮಂತ್ರಿ ವಿಜಯ್ ರೂಪಾನಿ ಅಭಿನಂದಿಸಿದ್ದಾರೆ. ತನ್ನ ಕ್ರೀಡಾ ಕೌಶಲ್ಯದಿಂದ ಜಾಗತಿಕ ಮಟ್ಟದಲ್ಲಿ ಗುಜರಾತ್ ಮತ್ತು ಭಾರತಕ್ಕೆ ಹೆಮ್ಮೆಯನ್ನುಂಟು ಮಾಡಿರುವುದಕ್ಕಾಗಿ ರಾಜ್ಯ ಸರಕಾರದ ‘ದಿವ್ಯಾಂಗ ಖೇಲ್ ಪ್ರೋತ್ಸಾಹನ ಪುರಸ್ಕಾರ ಯೋಜನೆ ’ಯಡಿ ಅವರಿಗೆ ಮೂರು ಕೋ.ರೂ.ಗಳ ಬಹುಮಾನವನ್ನು ಪ್ರಕಟಿಸಿದ್ದಾರೆ ’ಎಂದು ಮುಖ್ಯಮಂತ್ರಿಗಳ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News