ಕಾಂಗೊದ ಗ್ರಾಮದ ಮೇಲೆ ಬಂಡುಕೋರರ ದಾಳಿ : ಮನೆಗೆ ಬೆಂಕಿ; ಕನಿಷ್ಟ 19 ಮಂದಿ ಮೃತ್ಯು

Update: 2021-08-29 18:00 GMT

ಕಿನ್ಷಸ, ಆ.29: ಕಾಂಗೊ ಗಣರಾಜ್ಯದ ಪೂರ್ವಪ್ರಾಂತ್ಯದ ಹಳ್ಳಿಯೊಂದರ ಮೇಲೆ ದಾಳಿ ನಡೆಸಿದ ಉಗಾಂಡಾ ಬಂಡುಕೋರರು ಹಲವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಮನೆಗೆ ಬೆಂಕಿ ಹಚ್ಚಿದ್ದು ಕನಿಷ್ಟ 19 ಮಂದಿಯನ್ನು ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಾಂಗೊದ ನಾರ್ಥ್ ಕಿವು ಪ್ರದೇಶದ ಬೆನಿ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ‌

ಈ ಪ್ರಾಂತ್ಯದಲ್ಲಿ ಅಧ್ಯಕ್ಷ ಫೆಲಿಕ್ಸ್ ಶಿಸೆಕೆಡಿ ತುರ್ತು ಪರಿಸ್ಥಿತಿ ಘೋಷಿಸಿದ್ದರೂ ಐಸಿಸ್ ನ ಸಹಸಂಘಟನೆ ಎಡಿಎಫ್ ಇತ್ತೀಚಿನ ದಿನಗಳಲ್ಲಿ ಹಲವು ಮಾರಣಾಂತಿಕ ದಾಳಿ ಸಂಘಟಿಸುತ್ತಿದೆ. ಬಂಡುಕೋರರು ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಹಲವರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು ಬಳಿಕ ಮನೆಯೊಳಗೆ ಕೂಡಿ ಹಾಕಿ ಬೆಂಕಿ ಹಚ್ಚಿದ್ದಾರೆ. ದಾಳಿಯ ಬಳಿಕ ಹಲವು ನಾಗರಿಕರು ನಾಪತ್ತೆಯಾಗಿದ್ದು ಇವರ ಶೋಧ ಕಾರ್ಯಾಚರಣೆಗೆ ತೊಡಗಿದ್ದ ರೆಡ್ಕ್ರಾಸ್ ಕಾರ್ಯಕರ್ತರು ಸಮೀಪದ ಅರಣ್ಯದಲ್ಲಿ 19 ಮಂದಿಯ ಮೃತದೇಹವನ್ನು ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ಪ್ರದೇಶದಲ್ಲಿ ಉಗ್ರರ ದಾಳಿ ನಿರಂತರ ನಡೆಯುತ್ತಿದ್ದರೂ ಸೂಕ್ತ ಭದ್ರತಾ ವ್ಯವಸ್ಥೆಯಿಲ್ಲ. ಘಟನೆ ನಡೆದ ಸಂದರ್ಭ ಈ ಗ್ರಾಮದಲ್ಲಿ ಯಾವುದೇ ಭದ್ರತಾ ಸಿಬಂದಿ ಇರಲಿಲ್ಲ ಎಂದು ನ್ಯೂ ಸಿವಿಲ್ ಸೊಸೈಟಿ ಆರ್ಗನೈಸೇಷನ್ ನ ವಕ್ತಾರ ಮೆಲೆಕಿ ಮುಲಾಲಾ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಮೇ ತಿಂಗಳಿಂದ ನಾರ್ಥ್ ಕಿವು ಮತ್ತು ಇಟೂರಿ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದು ಸಶಸ್ತ್ರ ಬಂಡುಗೋರರ ದಾಳಿಯನ್ನು ಎದುರಿಸಲು ಸೇನೆ ಮತ್ತು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಐಸಿಸ್ ವಿರುದ್ಧ ಹೋರಾಟದಲ್ಲಿ ಸರಕಾರಕ್ಕೆ ನೆರವಾಗಲು ಅಮೆರಿಕ ತನ್ನ ವಿಶೇಷ ಕಾರ್ಯಾಚರಣೆ ಪಡೆಯನ್ನು ಕಾಂಗೊಗೆ ರವಾನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News