ಇರುವೆ, ಅವಕಾಡೊ, ರೊಬೊಟ್ ಸಹಿತ ಅಂತರಿಕ್ಷಕ್ಕೆ ಹಾರಿದ ಸ್ಪೇಸ್ಎಕ್ಸ್ ನೌಕೆ

Update: 2021-08-29 18:21 GMT

ವಾಷಿಂಗ್ಟನ್, ಆ.29: ಇರುವೆಗಳು, ಅವಕಾಡೊ ಹಣ್ಣುಗಳು ಹಾಗೂ ಮಾನವ ಗಾತ್ರದ ರೊಬೊಟ್ಗಳನ್ನು ಹೊತ್ತ ಅಂತರಿಕ್ಷ ನೌಕೆ ಸ್ಪೇಸ್ಎಕ್ಸ್ ಶನಿವಾರ ನಾಸಾದ ಕೆನ್ನೆಡಿ ಅಂತರಿಕ್ಷ ಕೇಂದ್ರದಿಂದ ಅಂತರಾಷ್ಟ್ರೀಯ ಅಂತರಿಕ್ಷ ನಿಲ್ದಾಣದತ್ತ ರವಿವಾರ ಯಾನ ಆರಂಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹವಾಮಾನ ವೈಪರೀತ್ಯದ ಕಾರಣ ಶನಿವಾರ ನಡೆಸಿದ ಉಡ್ಡಯನ ಪ್ರಯತ್ನ ವಿಫಲವಾಗಿತ್ತು. ‌

ಎಲಾನ್ ಮಸ್ಕ್ ಅವರ ಒಡೆತನದ ಸ್ಪೇಸ್ಎಕ್ಸ್ ಗಗನನೌಕೆ ಸೋಮವಾರ ಭೂಮಿಗೆ ಹಿಂತಿರುಗುವ ಯೋಜನೆಯಿದ್ದು ಇದು 10 ವರ್ಷದೊಳಗೆ ನಾಸಾದಲ್ಲಿ ನಡೆಸಿರುವ 23ನೇ ಅಂತರಿಕ್ಷ ಪ್ರಯಾಣವಾಗಿದೆ. ಅಂತರಿಕ್ಷ ಕೇಂದ್ರದಲ್ಲಿರುವ 9 ಗಗನಯಾನಿಗಳ ಬಳಕೆಗಾಗಿ 2,170 ಕಿ.ಗ್ರಾಂನಷ್ಟು ತೂಕದ ವಸ್ತುಗಳನ್ನು ಈ ನೌಕೆಯಲ್ಲಿ ರವಾನಿಸಲಾಗಿದೆ. ಇದರಲ್ಲಿ ಸಂಶೋಧನೆಗೆ ನೆರವಾಗುವ ಕೆಲವು ವಸ್ತುಗಳು, ಅವಕಾಡೊ, ಲಿಂಬೆ, ಐಸ್ಕ್ರೀಂನಂತಹ ಖಾದ್ಯವಸ್ತುಗಳು ಸೇರಿವೆ. 

ಉಪ್ಪು ನೀರಿನ ಸಿಗಡಿ, ಇರುವೆಗಳು ಹಾಗೂ ಕೆಲವು ಸಸ್ಯಗಳನ್ನು ಸಂಶೋಧನೆಗಾಗಿ ರವಾನಿಸಲಾಗಿದ್ದರೆ, ಕಾಂಕ್ರೀಟು, ಸೌರ ಕೋಶ ಹಾಗೂ ಇತರ ವಸ್ತುಗಳು ತೂಕರಹಿತ ವಾತಾವರಣದಲ್ಲಿ ಹೇಗಿರುತ್ತವೆ ಎಂದು ಕಂಡುಕೊಳ್ಳಲು ರವಾನಿಸಲಾಗಿದೆ.
ಜಪಾನ್ನ ನವೋದ್ಯಮ ಸಂಸ್ಥೆಯೊಂದು ನಿರ್ಮಿಸಿರುವ ಸಂಶೋಧನೆ ಮತ್ತು ದುರಸ್ತಿ ಕಾರ್ಯ ನಡೆಸುವ ರೊಬೊಟ್ ಕೂಡಾ ಅಂತರಿಕ್ಷಕ್ಕೆ ನೆಗೆದಿದೆ. 

ಮೊದಲು ಅಂತರಿಕ್ಷ ನಿಲ್ದಾಣದೊಳಗೆ ಇದರ ಕಾರ್ಯಕ್ಷಮತೆ ಪರೀಕ್ಷಿಸಿ ಬಳಿಕ ಅಂತರಿಕ್ಷದಲ್ಲಿ ದುರಸ್ತಿ ಕಾರ್ಯಕ್ಕೆ ಇದನ್ನು ನಿಯೋಜಿಸುವ ಉದ್ದೇಶವಿದೆ ಎಂದು ರೊಬೊಟ್ ನಿರ್ಮಿಸಿದ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಟೊಯೊಟಕ ಕೊಝುಕಿ ಹೇಳಿದ್ದಾರೆ. 2025ರ ವೇಳೆಗೆ ಚಂದ್ರನ ಅಂಗಳದಲ್ಲಿ ನಿಲ್ದಾಣ ನಿರ್ಮಿಸುವುದು, ಚಂದ್ರನ ಮೇಲ್ಮೈಯಿಂದ ಮಣ್ಣು ಅಗೆದು ತರುವುದು ಮುಂತಾದ ಕಾರ್ಯವನ್ನು ಈ ರೊಬೊಟ್ ನಿರ್ವಹಿಸಲಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News