ಐಡಾ ಚಂಡಮಾರುತದ ಭೀತಿ: ಅಮೆರಿಕ ಕರಾವಳಿಯಿಂದ ಸಾವಿರಾರು ಜನರ ಪಲಾಯನ
ವಾಷಿಂಗ್ಟನ್, ಆ. 29: ಅಮೆರಿಕದ ಕೊಲ್ಲಿ ಪ್ರದೇಶದಲ್ಲಿ ಐಡಾ ಚಂಡಮಾರುತದಿಂದಾಗಿ ಸಾಗರದಲ್ಲಿ ಬಿರುಗಾಳಿ ಎದ್ದ ಕಾರಣ ಭೀತಿಗೊಂಡ ಕರಾವಳಿ ಪ್ರದೇಶದ ಸಾವಿರಾರು ಜನ ಸುರಕ್ಷಿತ ಪ್ರದೇಶದತ್ತ ಪಲಾಯನ ಮಾಡಿದ್ದಾರೆ. ಚಂಡಮಾರುತದಿಂದ ಆಗಿರುವ ಹಾನಿಯಿಂದ ಶೀಘ್ರ ಚೇತರಿಸಿಕೊಳ್ಳಲು ರಾಜ್ಯಗಳಿಗೆ ನೆರವಾಗುವುದಾಗಿ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದಾರೆ.
ಐದು ಹಂತಗಳ ಮಾನದಂಡದಲ್ಲಿ 4ನೇ ಹಂತದಲ್ಲಿರುವ ಅತ್ಯಂತ ಅಪಾಯಕಾರಿ ಚಂಡಮಾರುತವಾಗಿ ರೂಪುಗೊಳ್ಳಲಿರುವ ಐಡಾ, ರವಿವಾರ ರಾತ್ರಿ ಅಮೆರಿಕವನ್ನು ಅಪ್ಪಳಿಸಲಿದೆ. ಈ ಸಂದರ್ಭ ಗಂಟೆಗೆ 320 ಕಿಮೀ ವೇಗದ ಗಾಳಿ ಸಹಿತ ಧಾರಾಕಾರ ಮಳೆಯಾಗಲಿದೆ ಮತ್ತು ಸಮುದ್ರದಲ್ಲಿ ಸುಮಾರು 10ರಿಂದ 15 ಅಡಿ ಎತ್ತರದ ನೀರಿನ ಅಲೆಗಳು ರೂಪುಗೊಳ್ಳಲಿದೆ ಎಂದು ಅಮೆರಿಕದ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ತಗ್ಗು ಪ್ರದೇಶದಲ್ಲಿರುವವರು ಹಾಗೂ ಕರಾವಳಿ ಪ್ರದೇಶದ ಜನತೆಯನ್ನು ಸ್ಥಳಾಂತರಿಸಲಾಗುತ್ತಿದ್ದು ಹೆದ್ದಾರಿಯಲ್ಲಿ ಟ್ರಾಫಿಕ್ ಜ್ಯಾಂ ಉಂಟಾಗಿದೆ. ಹೆಚ್ಚಿನ ಅಪಾಯಕ್ಕೆ ಸಿಲುಕಿರುವ ಟೆಕ್ಸಾಸ್ ಮತ್ತು ಲೂಸಿಯಾನಾ ಪ್ರದೇಶಗಳಿಗೆ ತುರ್ತು ಕಾರ್ಯಪಡೆಯ ಸುಮಾರು 500ರಷ್ಟು ಸಿಬಂದಿಗಳನ್ನು ರವಾನಿಸಲಾಗಿದೆ. ಇಲ್ಲಿ ವಿದ್ಯುತ್ವ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು ಸಾಧ್ಯವಾದಷ್ಟು ಬೇಗ ಇದನ್ನು ಸರಿಪಡಿಸಲು ಸಿಬಂದಿಗಳು ಶ್ರಮಿಸುತ್ತಿದ್ದಾರೆ ಎಂದು ಅಧ್ಯಕ್ಷ ಬೈಡೆನ್ ಹೇಳಿದ್ದಾರೆ.