"ಬಿಜೆಪಿ ನಮ್ಮನ್ನು ಒಬ್ಬಂಟಿಯಾಗಿಸಿಬಿಟ್ಟಿದೆ": ಅಸಮಾಧಾನದೊಂದಿಗೆ ಕೇಂದ್ರ ನಾಯಕರಿಗಾಗಿ ಕಾಯುತ್ತಿರುವ ಕಾರ್ಯಕರ್ತರು

Update: 2021-08-30 07:23 GMT

ಕೊಲ್ಕತ್ತಾ:  ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ಮೇ 2ರಂದು ಘೋಷಣೆಯಾಗಿ ಟಿಎಂಸಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿರುವುದು ಅಲ್ಲಿನ ಬಿಜೆಪಿ ಸದಸ್ಯರ ಆತ್ಮಸ್ಥೈರ್ಯ ಕುಗ್ಗಿಸಿದೆ. ಚುನಾವಣೋತ್ತರ ಹಿಂಸಾಚಾರಗಳಲ್ಲಿ ಕನಿಷ್ಠ ಎರಡು ಡಜನ್ ಕಾರ್ಯಕರ್ತರ ಹತ್ಯೆಯಾಗಿದೆ ಹಾಗೂ ನೂರಾರು ಮಂದಿ ನಿರ್ವಸಿತರಾಗಿದ್ದಾರೆಂದು ಬಿಜೆಪಿ ಹೇಳುತ್ತಿದೆ. ಅತ್ಯಾಚಾರದ ಪ್ರಕರಣಗಳೂ ನಡೆದಿವೆ ಎಂದು ಪಕ್ಷ ಆರೋಪಿಸುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಆಡಳಿತ ಟಿಎಂಸಿಯ ಕಾರ್ಯಕರ್ತರಿಂದ ಬೆದರಿಕೆ ಹಾಗೂ ಹಿಂಸೆ ಎದುರಿಸುತ್ತಿದ್ದಾರೆಂಬ ಆರೋಪ ಪಕ್ಷ ವಲಯದಲ್ಲಿ ವ್ಯಾಪಕವಾಗಿರುವ ನಡುವೆಯೇ ಚುನಾವಣಾ ಪ್ರಚಾರ ಸಂದರ್ಭ ರಾಜ್ಯದಲ್ಲಿ ಅವಿರತ ಪ್ರವಾಸ ಕೈಗೊಂಡಿದ್ದ ರಾಷ್ಟ್ರೀಯ ನಾಯಕರು ಈಗ ರಾಜ್ಯದತ್ತ ಮುಖ ಮಾಡಿಲ್ಲ ಎಂಬ ಕುರಿತು ಅಸಮಾಧಾನವೂ ಪಕ್ಷದ ಕಾರ್ಯಕರ್ತರಲ್ಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ  ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಭೇಟಿ ನೀಡಿ ಪಕ್ಷ ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚಿಸಬೇಕೆಂಬ ಆಗ್ರಹ ಎಲ್ಲೆಡೆ ಕೇಳಿ ಬರುತ್ತಿದೆ. ಸ್ಥಳೀಯ ಸಂಸದರೂ ತಳಮಟ್ಟದಲ್ಲಿ ಕಾಣಿಸುತ್ತಿಲ್ಲ ಎಂಬ ಕೊರಗು ಕಾರ್ಯಕರ್ತರಿಗಿದೆ. ಸಂಸದ ಬಾಬುಲ್ ಸುಪ್ರಿಯೋ ಅವರಂತೂ ಯಾವುದೇ ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಜತೆಗೆ ರಾಜಕೀಯದಿಂದ ದೂರವಿರುವುದಾಗಿ ಅವರೀಗಾಗಲೇ ಘೋಷಿಸಿದ್ದಾರೆ. ಅತ್ತ ಸಂಸದ ಸೌಮಿತ್ರ ಖಾನ್ ಕೂಡ ಪಕ್ಷದ ರಾಜ್ಯ ನಾಯಕರ ಬಗ್ಗೆ ಟೀಕೆಗಳನ್ನು ಮಾಡುತ್ತಲೇ ಇದ್ದಾರೆ.

ಚುನಾವಣೆಯ ನಂತರ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ನಡೆದ ಎರಡು ಪಕ್ಷದ ಸಂಘಟನಾ ಸಭೆಗಳಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಪಶ್ಚಿಮ ಬಂಗಾಳ ಉಸ್ತುವಾರಿ ಅರವಿಂದ ಮೆನನ್ ಹಾಗೂ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ (ಸಂಘಟನೆ) ಶಿವಪ್ರಕಾಶ್  ಭಾಗವಹಿಸಿದ್ದರು. ಈ ಇಬ್ಬರು ರಾಷ್ಟ್ರ ಮಟ್ಟದ ನಾಯಕರನ್ನು ಹೊರತುಪಡಿಸಿ ಇತರ ಯಾವುದೇ ನಾಯಕರು ಇಲ್ಲಿಯ ತನಕ ರಾಜ್ಯಕ್ಕೆ ಚುನಾವಣೆ ನಂತರ ಭೇಟಿ ನೀಡಿಲ್ಲ.

ನಾಯಕತ್ವ ತಮ್ಮನ್ನು ಕೈಬಿಟ್ಟಿದೆ ಎಂದು ಪಕ್ಷ ಕಾರ್ಯಕರ್ತರಲ್ಲಿರುವ ಅಸಮಾಧಾನದ ಕುರಿತು  ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, "ಹಲವು ಕಾರ್ಯಕರ್ತರು ಅಸಮಾಧಾನದಿಂದಿದ್ದಾರೆ ಎಂದು ತಿಳಿದಿದೆ. ಎರಡು ತಿಂಗಳ ಹಿಂದೆ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಸಂದರ್ಭ ಶೇ50ರಷ್ಟು ಮಂಡಲ ಸಭಾಪತಿಗಳು ಅಸಮಾಧಾನದಿಂದ ಸಭೆಗಳಿಂದ ಹೊರಗುಳಿದಿದ್ದರು. ಅವರ ಜತೆಗೆ ಸಂಪರ್ಕ ಸಾಧಿಸಲಾಗುತ್ತಿದೆ" ಎಂದು ಹೇಳುತ್ತಾರಲ್ಲದೆ ಕಾರ್ಯಕರ್ತರು ರಾಷ್ಟ್ರ ಮಟ್ಟದ ನಾಯಕರ ಆಗಮನಕ್ಕಾಗಿ ಕಾಯುವ ಬದಲು ಪಕ್ಷ ಸಂಘಟನೆಯನ್ನು ಬಲಪಡಿಸಬೇಕು ಎಂಬ ಸಲಹೆಯನ್ನೂ ನೀಡುತ್ತಾರೆ.

ಆದರೆ ಕಾರ್ಯಕರ್ತರು ಮಾಡುವ ಆರೋಪಗಳನ್ನು ಕೇಂದ್ರ ನಾಯಕರು ಅಲ್ಲಗಳೆಯುತ್ತಿದ್ದಾರಲ್ಲದೆ ಪಕ್ಷ ಕಾರ್ಯಕರ್ತರತ್ತ ಸದಾ ಸಹಾಯದ ಹಸ್ತ ಚಾಚಿದೆ ಎನ್ನುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News