ಜಾರಿ ನಿರ್ದೇಶನಾಲಯ ಕಳುಹಿಸಿದ್ದು ಸಮನ್ಸ್ ಅಲ್ಲ ಪ್ರೇಮಪತ್ರ: ಶಿವಸೇನೆ ಸಂಸದ ರಾವತ್ ವ್ಯಂಗ್ಯ

Update: 2021-08-30 08:29 GMT

ಮುಂಬೈ: ಶಿವಸೇನಾ ಸಂಸದ ಸಂಜಯ್ ರಾವತ್ ಸೋಮವಾರ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಜಾರಿ ನಿರ್ದೇಶನಾಲಯ (ಈಡಿ) ನೀಡಿರುವ ನೋಟಿಸ್ ‘ಡೆತ್ ವಾರಂಟ್’ ಅಲ್ಲ, ರಾಜಕೀಯ ಕಾರ್ಯಕರ್ತರಿಗೆ 'ಪ್ರೇಮ ಪತ್ರ' ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಸಚಿವ ಹಾಗೂ ಶಿವಸೇನೆ ನಾಯಕ ಅನಿಲ್ ಪರಬ್ ಅವರಿಗೆ ಅಕ್ರಮ ಹಣ ವರ್ಗಾವಣೆ ವಿರೋಧಿ ಏಜೆನ್ಸಿಯ ಮುಂದೆ ಹಾಜರಾಗುವಂತೆ ಸೂಚಿಸಿದ ಮರುದಿನ ರಾವತ್ ಈ ಹೇಳಿಕೆ ನೀಡಿದ್ದಾರೆ.

"ಬಲಿಷ್ಠವಾದ ಹಾಗೂ  ಅಜೇಯವಾದ ಮಹಾ ವಿಕಾಸ ಅಘಾಡಿ (ಎಂವಿಎ) ಯ ಗೋಡೆಯನ್ನು ಒಡೆಯುವ ವಿಫಲ ಪ್ರಯತ್ನಗಳ ನಂತರ ಇಂತಹ ಪ್ರೇಮ ಪತ್ರಗಳ ಆವರ್ತನ ಹೆಚ್ಚಾಗಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

"ಅನಿಲ್ ಪರಬ್ ಅವರನ್ನು ಬಿಜೆಪಿ ನಾಯಕರು ಗುರಿಯಾಗಿಸಿಕೊಂಡಿದ್ದಾರೆ. ಅವರು ನೋಟಿಸ್‌ಗೆ ಪ್ರತಿಕ್ರಿಯಿಸುತ್ತಾರೆ ಹಾಗೂ ಈಡಿಗೆ ಸಹಕರಿಸುತ್ತಾರೆ" ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಹಾಗೂ  ಇತರರ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಮಂಗಳವಾರ ಅನಿಲ್ ಪರಬ್ ಅವರನ್ನು ವಿಚಾರಣೆಗೆ ಕರೆಸಿಕೊಂಡಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

"ಒಬ್ಬ ಬಿಜೆಪಿ ವ್ಯಕ್ತಿ ಈಡಿಯಲ್ಲಿ ಡೆಸ್ಕ್ ಆಫೀಸರ್ ಆಗಿರಬಹುದು ಅಥವಾ ಈಡಿ ಅಧಿಕಾರಿ ಬಿಜೆಪಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿರಬಹುದು" ಎಂದು ರಾವತ್ ಹೇಳಿದರು.

ಬಿಜೆಪಿಯ ಮಾಜಿ ಮಿತ್ರ ಪಕ್ಷವಾಗಿರುವ ಶಿವಸೇನೆ ಮಹಾರಾಷ್ಟ್ರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಹಾಗೂ  ಕಾಂಗ್ರೆಸ್‌ನೊಂದಿಗೆ ಅಧಿಕಾರವನ್ನು ಹಂಚಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News