×
Ad

ನಾರಾಯಣ ರಾಣೆಯ ಬಂಧನಕ್ಕೆ ಸೂಚಿಸಿದ್ದ ಮಹಾರಾಷ್ಟ್ರ ಸಚಿವ ಅನಿಲ್‌ ಪರಬ್‌ ಗೆ ಇಡಿ ನೋಟಿಸ್‌ !

Update: 2021-08-30 16:15 IST
Twitter/ANI

ಮುಂಬೈ: ಮಹಾರಾಷ್ಟ್ರ ಸಾರಿಗೆ ಸಚಿವ ಹಾಗೂ ಶಿವಸೇನೆ ನಾಯಕ ಅನಿಲ್ ಪರಬ್ ಅವರಿಗೆ ನೋಟಿಸ್ ಜಾರಿಗೊಳಿಸಿರುವ ಜಾರಿ ನಿರ್ದೇಶನಾಲಯ ಆಗಸ್ಟ್ 31ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಪಾಳಮೋಕ್ಷಗೈಯ್ಯುವ ಬೆದರಿಕೆಯೊಡ್ಡಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಬಂಧಿಸುವಂತೆ ಪೊಲೀಸರಿಗೆ  ಅನಿಲ್ ಪರಬ್ ಸೂಚಿಸುತ್ತಿರುವ ವೀಡಿಯೋ ಕ್ಲಿಪ್ ಹರಿದಾಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ರಾಣೆ ಅವರನ್ನು ಪೊಲೀಸರು ಆಗಸ್ಟ್ 24ರಂದೇ ಬಂಧಿಸಿದ್ದರೂ ಕೆಲವೇ ಗಂಟೆಗಳಲ್ಲಿ ಅವರಿಗೆ ಜಾಮೀನು ದೊರಕಿತ್ತು.

ತಮಗೆ ಬಂದಿರುವ ಜಾರಿ ನಿರ್ದೇಶನಾಲಯದ ನೋಟಿಸ್‍ನಲ್ಲಿ ಯಾವುದೇ ನಿರ್ದಿಷ್ಟ ಪ್ರಕರಣದ ಉಲ್ಲೇಖವಿಲ್ಲ, ಆದರೆ ಆಗಸ್ಟ್ 31,ರಂದು 11 ಗಂಟೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅನಿಲ್ ಪರಬ್ ಹೇಳಿದ್ದಾರೆ. "ಇಂತಹ ಒಂದು ಬೆಳವಣಿಗೆ ನಡೆಯಬಹುದೆಂದು ನಿರೀಕ್ಷಿಸಿದ್ದೆವು. ಇದನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು" ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಮತ್ತಿತರ ಕೆಲವರ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ವಿಚಾರಣೆಗೆ ಅನಿಲ್ ಪರಬ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News