ಇಂಧನ, ಕನ್ನಡ -ಸಂಸ್ಕೃತಿ ಇಲಾಖೆಯಲ್ಲಿ ಹೊಸತನ: ಸಚಿವ ಸುನೀಲ್
ಉಡುಪಿ, ಆ.30: ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹೊಸತನ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಎರಡೂ ಇಲಾಖೆಯಲ್ಲಿ ಸೆ.10ರಿಂದ ಮೊದಲ 100 ದಿನಗಳ ಗುರಿಯೊಂದಿಗೆ 100 ದಿನಗಳ ಯೋಜನೆಯನ್ನು ಘೋಷಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮ ವಾರ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ತಿಂಗಳ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಎಲ್ಲ ಎಸ್ಕಾಂಗಳ ಸಭೆ ನಡೆಸಿ, ಗ್ರಾಹಕರು, ರೈತರು, ಉದ್ಯಮಿಗಳನ್ನು ದೃಷ್ಠಿಯಲ್ಲಿ ಟ್ಟುಕೊಂಡು 100 ದಿನಗಳಲ್ಲಿ ಏನೆಲ್ಲ ಮಾಡಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಲಾಗುವುದೆಂದರು.
ಇಲಾಖೆಯಲ್ಲಿನ ವರ್ಗಾವಣೆ ಮತ್ತು ನೇಮಕಾತಿಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಆಗದಂತೆ ಮತ್ತು ಭ್ರಷ್ಟಾಚಾರ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಟ್ರಾನ್ಸ್‌ಫಾರ್ಮರ್‌ಗಳ ದುರುಪಯೋಗ ತಡೆ ಮತ್ತು ಸರಿಯಾದ ಸದ್ಬಳಕೆಗೆ ಹೊಸ ಯೋಜನೆ ಪ್ರಕಟಿಸಲಾಗುವುದು. ವಿದ್ಯುತ್ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಜವಾಬ್ದಾರಿಗಳ ಹಂಚಿಕೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿಗಳ ಕೊರತೆ ಇದ್ದು, ಬೆಂಗಳೂರಿನಲ್ಲಿ ಉಳಿದುಕೊಂಡಿರುವ ನಾಲ್ಕು ಮಂದಿ ಜಂಟಿ ಕಾರ್ಯದರ್ಶಿ ಗಳನ್ನು ರಾಜ್ಯದ ನಾಲ್ಕು ಕಂದಾಯ ವಿಭಾಗಕ್ಕೆ ಕಳುಹಿಸಿಕೊಡುವ ಮೂಲಕ ಇಲಾಖೆಯ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಕೇರಳ ಗಡಿಭಾಗದ ಗ್ರಾಮಗಳ ಹೆಸರನ್ನು ಬದಲಾಯಿಸಿರುವುದಕ್ಕೆ ಈಗಾಗಲೇ ಕರ್ನಾಟಕ ಸರಕಾರ ಆಕ್ಷೇಪ ಸಲ್ಲಿಸಿದೆ. ಯಾವುದೇ ಕಾರಣಕ್ಕೂ ಕನ್ನಡದ ಶಬ್ದಗಳನ್ನು ಅಲ್ಲಿನ ಸರಕಾರ ಬದಲಾಯಿಸಬಾರದು. ಅಲ್ಲಿನ ಕನ್ನಡದ ಜನರ ಭಾವನೆಗಳಿಗೆ ಧಕ್ಕೆ ಆಗಬಾರದು. ಅಗತ್ಯ ಬಿದ್ದರೆ ಅಲ್ಲಿನ ಸರಕಾರದ ಜೊತೆ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದರು.
ಅಕಾಡೆಮಿಗಳಿಗೆ ಅನುದಾನ
ಕೊರೋನ ಕಾರಣಕ್ಕೆ ಕಡಿತ ಮಾಡಲಾಗಿರುವ ಅಕಾಡೆಮಿಗಳ ಹಣವನ್ನು ನೀಡುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ಮಾಡಲಾಗಿದೆ. ಇದಕ್ಕೆ ಅವರು ತಾತ್ವಿಕ ಒಪ್ಪಿಗೆ ಕೊಟ್ಟಿದ್ದಾರೆ. ಜಯಂತಿಗಳು ಸರಕಾರ ಅಥವಾ ಜಾತಿಯ ಕಾರ್ಯಕ್ರಮಗಳಾಗದೇ ಜನರ ಕಾರ್ಯಕ್ರಮ ಆಗಬೇಕು ಎಂದರು.
ಕಸ್ತೂರಿ ರಂಗನ್ ವರದಿಯಲ್ಲಿ ಜನಜೀವನಕ್ಕೆ ತೊಂದರೆ ಆಗುವಂತಹ ಅಂಶಗಳನ್ನು ಸೇರಿಸಲಾಗಿದೆ. ಈಗಾಗಲೇ ಕೇಂದ್ರ ಸರಕಾರ ಅವುಗಳಲ್ಲಿ ಸಾಕಷ್ಟು ವಿಚಾರಗಳನ್ನು ಸಡಿಲಗೊಳಿಸಿದೆ. ಅದಕ್ಕೆ ನಮ್ಮ ಒಪ್ಪಿಗೆ ಕೂಡ ಇದೆ. ಅದೇ ರೀತಿ ಇಕೋ ಸೆಂಸಿಟಿವ್ ರೆನ್ ಅನ್ನು ಝಿರೋ ಕಿ.ಮೀ. ಮಾಡ ಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಇದಕ್ಕೆ ಒಪ್ಪಿಗೆ ನೀಡಿದರೆ ಉಳಿದ ಯಾವುದೇ ಸಮಸ್ಯೆ ಆುವುದಿಲ್ಲ ಎಂದು ಅವರು ತಿಳಿಸಿದರು.
ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಸುಭಾಶ್ ಚಂದ್ರ ವಾಗ್ಳೆ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯೋತ್ಸವ ಪ್ರಶಸ್ತಿಗೆ ಹೊಸ ಸ್ಪರ್ಶ
ರಾಜ್ಯೋತ್ಸವ ಪ್ರಶಸ್ತಿಗೆ ಹೊಸ ಸ್ಪರ್ಶ ನೀಡುವ ಯೋಚನೆ ನಮ್ಮ ಮುಂದೆ ಇದೆ. ಅರ್ಜಿದಾರರನ್ನು ಹೊರತುಪಡಿಸಿ ಸಮಿತಿಯೇ ಸಾಧಕರನ್ನು ಗುರುತಿಸುವ ಕಾರ್ಯ ಮಾಡಬೇಕಾಗುತ್ತದೆ. ಸಾಧಕರ ಬಗ್ಗೆ ಅರ್ಜಿ ಕೊಡುವುದಕ್ಕಿಂತ ನಾವೇ ಹುಡುಕುವಂತಾಗಬೇಕು. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಸಾರ್ವಜನಿಕರ ಅಭಿಪ್ರಾಯ ಪಡೆದು ನಿಯಮಾವಳಿಗಳನ್ನು ರೂಪಿಸಲಾಗುವುದು. ಆಯ್ಕೆಯಲ್ಲಿ ಒತ್ತಡ ಬಂದರೂ ನಾನು ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂದು ಚಿವ ಸುನೀಲ್ ಕುಮಾರ್ ತಿಳಿಸಿದರು.
ನಾಡಗೀತೆ ಮತ್ತು ಭುವನೇಶ್ವರಿ ಫೋಟೋ ಬಗ್ಗೆ ಈ ವಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು. ನಾಡಗೀತೆಯನ್ನು ಕಡಿತಗೊಳಿಸದೆ ಸಂಗೀತವನ್ನು ಚುಟುಕುಗೊಳಿಸಬೇಕಾಗಿದೆ. ಈ ಸಂಬಂಧ ಚೆನ್ನವೀರ ಕಣವಿ ನೀಡಿದ ಶಿಫಾರಸ್ಸು ಗಮನದಲ್ಲಿಟ್ಟುಕೊಂಡು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು. ನಾಡಧ್ವಜದ ವಿಚಾರ ಈಗಾಗಲೇ ಚರ್ಚೆಯಲ್ಲಿದೆ. ಅದರಲ್ಲಿ ವಿವಾದ ಮಾಡುವ ಉದ್ದೇಶ ನಮಗೆ ಇಲ್ಲ. ಸೌಹಾರ್ದಯುತವಾಗಿ ಚರ್ಚೆ ಮಾಡಲಾಗುವುದು ಎಂದರು.
‘15 ದಿನ ಕಾಯಿರಿ...ಸಿಹಿ ಸುದ್ದಿ ನೀಡುತ್ತೇನೆ’
ಹೆಚ್ಚು ಹೆಚ್ಚು ರಂಗ ಚಟುವಟಿಕೆಗಳು ನಡೆಯುತ್ತಿರುವ ಉಡುಪಿ ಜಿಲ್ಲೆಯಲ್ಲಿ ರಂಗಾಯಣಕ್ಕೆ ಶಿಲಾನ್ಯಾಸ ನೆರವೇರಿಸಿ ಅರ್ಧಕ್ಕೆ ಕೈಬಿಟ್ಟಿರುವ ವಿಚಾರ ಸಚಿವ ಸುನೀಲ್ ಕುಮಾರ್ ಅವರ ಗಮನ ಸೆಳೆದಾಗ, ‘ಇನ್ನು ಕೇವಲ 15 ದಿನ ಕಾಯಿರಿ, ಕನ್ನಡ ಸಂಸ್ಕೃತಿ ಇಲಾಖೆಯಿಂದ ಉಡುಪಿ ಜಿಲ್ಲೆಗೆ ಸಿಹಿ ಸುದ್ದಿ ನೀಡು ತ್ತೇನೆ’ ಎಂದರು.
ನನಗೆ ಈಗಾಗಲೇ ಸಾವಿರಾರು ಪುಸ್ತಕಗಳ ಸಾರ್ವಜನಿಕ ಸಮಾರಂಭದಲ್ಲಿ ಉಡುಗೊರೆಯಾಗಿ ನೀಡಲಾಗಿದೆ. ಸೆ.5ರಂದು ಈ ಪುಸ್ತಕಗಳ ಪ್ರದರ್ಶಕ್ಕೆ ಕಾರ್ಕಳದಲ್ಲಿ ಚಾಲನೆ ನೀಡಿ, ಮುಂದೆ ಅವುಗಳನ್ನು ಹಂತಹಂತವಾಗಿ ಜಿಲ್ಲೆ ಮತ್ತು ತಾಲೂಕು ಗ್ರಂಥಾಲಯ, ಗ್ರಾಪಂಗಳ ಗ್ರಂಥಾಲಯ ಹಾಗೂ ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಗಳಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.
''ಹಿಂದುತ್ವ ಅಂದರೆ ಇನ್ನೊಂದು ಕೋಮು ಅಥವಾ ಸಮುದಾಯವನ್ನು ವಿರೋಧ ಮಾಡುವುದು ಅಲ್ಲವೇ ಅಲ್ಲ. ನನಗೆ ತುಂಬಾ ಜನ ಮುಸ್ಲಿಮ್ ಗೆಳೆಯರು ಬಾಲ್ಯದಲ್ಲೂ ಇದ್ದರು ಈಗಲೂ ಇದ್ದಾರೆ''
-ಸುನೀಲ್ ಕುಮಾರ್, ಸಚಿವರು