ಯುರೋಪ್ ನಲ್ಲಿ ಕೊರೋನ ಸೋಂಕಿನಿಂದ ಮೃತರ ಪ್ರಮಾಣ ಹೆಚ್ಚಳ: ವಿಶ್ವ ಆರೋಗ್ಯ ಸಂಸ್ಥೆ

Update: 2021-08-30 17:37 GMT

ವಿಶ್ವಸಂಸ್ಥೆ, ಆ.30: ಡಿಸೆಂಬರ್ 1ರ ವರೆಗೆ ಯುರೋಪ್ ನಲ್ಲಿ ಕೊರೋನ ಸೋಂಕಿನಿಂದಾಗಿ ಇನ್ನೂ 2,36,000 ಸಾವಿನ ಪ್ರಕರಣ ವರದಿಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಯುರೋಪ್ನಲ್ಲಿ ಇದುವರೆಗೆ ಕೊರೋನ ಸೋಂಕಿನಿಂದಾಗಿ 1.3 ಮಿಲಿಯನ್ ಜನ ಮೃತಪಟ್ಟಿದ್ದಾರೆ. ಯುರೋಪ್ ವಲಯದಲ್ಲಿ ಕಳೆದ ವಾರ ಸಾವಿನ ಪ್ರಕರಣಗಳಲ್ಲಿ 11% ಹೆಚ್ಚಳವಾಗಿದ್ದು, ಇದೇ ಪ್ರಮಾಣದಲ್ಲಿ ಮುಂದುವರಿದರೆ ಡಿಸೆಂಬರ್ ವೇಳೆಗೆ 2,36,000 ಸಾವು ಸಂಭವಿಸಬಹುದು. ವಿಶ್ವ ಆರೋಗ್ಯಸಂಸ್ಥೆಯ 53 ಯುರೋಪಿಯನ್ ಯೂನಿಯನ್ ಸದಸ್ಯ ದೇಶಗಳಲ್ಲಿ 33 ದೇಶಗಳಲ್ಲಿ ಕಳೆದ 2 ವಾರಗಳಲ್ಲಿ ಕೊರೋನ ಸೋಂಕಿನಿಂದಾಗುವ ಸಾವಿನ ಪ್ರಕರಣಗಳಲ್ಲಿ 10% ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ವಲಯದ ನಿರ್ದೇಶಕ ಹ್ಯಾನ್ಸ್ ಕ್ಲೂಗ್ ಹೇಳಿರುವುಾಗಿ ಮಾಧ್ಯಮಗಳು ವರದಿ ಮಾಡಿವೆ.

ಯುರೋಪ್ ಖಂಡದಾದ್ಯಂತ ಸೋಂಕು ಪ್ರಸರಣ ದರ ಅಧಿಕವಾಗಿದ್ದು, ಹಲವು ದೇಶಗಳಲ್ಲಿ ಆದ್ಯತೆಯ ವರ್ಗದ ಜನರಿಗೆ ಲಸಿಕೆ ನೀಡುವ ಪ್ರಮಾಣ ಅತ್ಯಂತ ಕಡಿಮೆಯಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ. ಅತ್ಯಂತ ಕ್ಷಿಪ್ರವಾಗಿ ಪ್ರಸಾರವಾಗುವ ಡೆಲ್ಟಾ ರೂಪಾಂತರಿತ ಕೊರೋನ ತಳಿ, ಅವಸರವಾಗಿ ನಿರ್ಬಂಧಗಳ ಸಡಿಲಿಕೆ ಹಾಗೂ ಬೇಸಿಗೆಯ ರಜಾ ಪ್ರವಾಸಗಳಿಂದ ಸೋಂಕು ಉಲ್ಬಣಿಸಿದೆ. ಯುರೋಪ್ ನ ಸುಮಾರು 50% ಜನತೆ ಪೂರ್ಣ ಲಸಿಕೆ ಪಡೆದಿದ್ದರೂ, ಲಸಿಕೀಕರಣ ಪ್ರಕ್ರಿಯೆ ಮಂದಗತಿಯಲ್ಲಿದೆ. ಕಳೆದ 6 ವಾರಗಳಲ್ಲಿ ಲಸಿಕೀಕರಣ ಪ್ರಕ್ರಿಯೆಯಲ್ಲಿ 14% ಇಳಿಕೆಯಾಗಿದೆ. ಕೆಲವು ದೇಶಗಳಲ್ಲಿ ಲಸಿಕೆಗಳ ಕೊರತೆಯಿದ್ದರೆ ಇನ್ನು ಕೆಲವು ದೇಶಗಳಲ್ಲಿ ಲಸಿಕೆ ಪಡೆಯಲು ಹಿಂಜರಿಕೆ ಇದೆ. ಯುರೋಪ್ ನ ಕೆಳ ಮತ್ತು ಮಧ್ಯಮ ಆದಾಯದ ದೇಶಗಳ ಪೈಕಿ 6% ದೇಶಗಳು ಮಾತ್ರ ಪೂರ್ಣ ಲಸಿಕೀಕರಣ ನಡೆಸಿವೆ. ಕೆಲವು ದೇಶಗಳಲ್ಲಿ 10% ಆರೋಗ್ಯ ಕಾರ್ಯಕರ್ತರು ಮಾತ್ರ ಲಸಿಕೆ ಪಡೆದಿದ್ದಾರೆ ಎಂದವರು ಹೇಳಿದ್ದಾರೆ.

ಕೊರೋನ ಸೋಂಕನ್ನು ನಿಯಂತ್ರಿಸಲು ಈಗಲೇ ಮುನ್ನೆಚ್ಚರಿಕೆ ವಹಿಸಬೇಕು. ಲಸಿಕೆ ಉತ್ಪಾದನೆ ಹೆಚ್ಚಿಸಿ, ಲಸಿಕೆ ಡೋಸ್ಗಳನ್ನು ಹಂಚಿಕೊಂಡು ಹಾಗೂ ಎಲ್ಲರಿಗೂ ಲಭ್ಯವಾಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಯುರೋಪ್ ವಲಯದ ದೆೀಶಗಳನ್ನು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News