×
Ad

ಮಹಿಳೆಯ ಖಾಸಗಿ ಫೋಟೊ ಹರಿಯಬಿಟ್ಟು ವಿಕೃತಿ: ಆರೋಪಿ ಸೆರೆ

Update: 2021-08-30 23:13 IST

ಮಂಗಳೂರು, ಆ.30: ಮಹಿಳೆಯ ಖಾಸಗಿ ಫೋಟೊಗಳನ್ನು ಇಟ್ಟುಕೊಂಡು ಲೈಂಗಿಕ ದೌರ್ಜನ್ಯ ನೀಡಿ, ಕೊನೆಗೆ ನಗ್ನ ಚಿತ್ರಗಳನ್ನು ಹರಿಯಬಿಟ್ಟ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮೂಡುಬಿದಿರೆಯ ಒಬ್ಬೆಟ್ಟು ಪಲ್ಕೆ ಕೂಡ್ಯಡ್ಕ ನಿವಾಸಿ ವಿಜಯಗೌಡ (33) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಮಹಿಳೆಯ ಮೊಬೈಲ್ ನಂಬರ್‌ನ್ನು ಪಡೆದು   ಆಗಾಗ ಕರೆ ಮಾಡಿ, ಅಸಭ್ಯವಾಗಿ ವರ್ತಿಸುತ್ತಿದ್ದ. ವಾಟ್ಸ್‌ಆ್ಯಪ್ ಮೆಸೇಜ್, ಕಾಲ್ ಮಾಡಿ ಮಹಿಳೆಯಲ್ಲಿ ನಗ್ನ ಚಿತ್ರಗಳನ್ನು ಕಳುಹಿಸುವಂತೆ ಪೀಡಿಸುತ್ತಿದ್ದ. ಮಹಿಳೆಯು ತನ್ನ ನಗ್ನ ಚಿತ್ರಗಳನ್ನು ಕಳುಹಿಸಲು ನಿರಾಕರಿಸಿದಾಗ ತನ್ನೊಂದಿಗೆ ಅನೈತಿಕ ಸಂಬಂಧ ಇದೆ ಎಂದು ಇತರರಲ್ಲಿ ತಿಳಿಸುವುದಾಗಿ ಮಹಿಳೆಗೆ ಬೆದರಿಸಿದ್ದ ಆರೋಪ ಕೂಡ ಈತನ ಮೇಲಿದೆ ಎಂದರು.

ಕೊನೆಗೆ ಮಹಿಳೆ ತನ್ನ ನಗ್ನ ಫೋಟೊಗಳನ್ನು ಆತನಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿಕೊಟ್ಟಿದ್ದಾರೆ. ನಂತರ ಈತನು ಲೈಂಗಿಕವಾಗಿ ಬಳಸಿಕೊಳ್ಳಲು ಒತ್ತಾಯಿಸುತ್ತಿದ್ದ. ಹಣಕ್ಕಾಗಿ ಬೇಡಿಕೆ ಇಟ್ಟು ಆ.19ರಂದು ಮಹಿಳೆಯ ಮನೆಗೆ ತೆರಳಿ ಬೆದರಿಸಿ 2,000 ರೂ. ಪಡೆದುಕೊಂಡಿದ್ದಾನೆ ಎಂದು ಮಾಹಿತಿ ನೀಡಿದರು.

ಆ.28ರಂದು ಮತ್ತೆ ಮಹಿಳೆಯ ಮನೆಗೆ ತೆರಳಿದ ಈತ ಅಧಿಕ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಹಣ ನೀಡಲು ಮಹಿಳೆ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ವಿಜಯಗೌಡ ಮಹಿಳೆಯ ನಗ್ನ ಚಿತ್ರಗಳನ್ನು ಬೇರೆಯವರಿಗೆ ಕಳುಹಿಸಿದ್ದಾನೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕಮಿಷನರ್ ಹೇಳಿದ್ದಾರೆ.

ಕಮಿಷನರ್ ಮನವಿ: ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ಯಾವುದೇ ಸಂದರ್ಭದಲ್ಲೂ ಎಷ್ಟೇ ಪರಿಚಿತರಾದರೂ ಖಾಸಗಿ ಫೋಟೊ, ವೀಡಿಯೊಗಳನ್ನು ಹಂಚಿಕೊಳ್ಳಬಾರದು. ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುವುದು, ಇಟ್ಟುಕೊಳ್ಳುವುದು ಕೂಡ ಸಲ್ಲದು. ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಟ್ಟುಕೊಂಡ ಸಂದರ್ಭ ಆ ಮೊಬೈಲ್ ಸ್ನೇಹಿತರ ಕೈ ಸೇರಿ ಸಮಸ್ಯೆಗಳು ತಲೆದೋರಿದ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಮೊಬೈಲ್‌ನಲ್ಲಿ ಚಾಟ್ ಮಾಡಿದ್ದನ್ನು ಕೂಡ ಆಗಂತುಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಹೆದರಿದ ಸ್ತ್ರೀಯರು ಅಪಾಯಕ್ಕೆ ತಮ್ಮನ್ನು ಒಡ್ಡಿಕೊಂಡಿರುವ ಪ್ರಕರಣಗಳು ಅಧಿಕ ಇವೆ. ಸ್ತ್ರೀಯರು ಎಚ್ಚರಿಕೆ ವಹಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News