ಕರಂದಾಡಿ: ಔಷಧಿ ಕಾರ್ಡ್ ವಿತರಣೆ, ಸಾಧಕರಿಗೆ ಸನ್ಮಾನ

Update: 2021-08-30 18:12 GMT

ಕಾಪು : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಇದರ ಪ್ರಾಯೋಜಕತ್ವದಲ್ಲಿ ಧರಣಿ ಸಮಾಜ ಸೇವಾ ಸಂಘ ಕಾಪು ಮತ್ತು ಸಮಾಜ ಸೇವಾ ವೇದಿಕೆ ಕಳತ್ತೂರು ಇವರ ಆಶ್ರಯದಲ್ಲಿ  ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಔಷಧಿ ಕಾರ್ಡ್ ವಿತರಣೆ, ವಿವಿಧ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಹಾಗೂ ಸಾಧಕರ ಸಮ್ಮಾನ ಕಾರ್ಯಕ್ರಮ ನಡೆಯಿತು. 

ಮಾಜಿ ಸಚಿವ ವಿನಯಕುಮಾರ್ ಸೊರಕೆ  ಮಾತನಾಡಿ, ಗ್ರಾಮೀಣ ಜನರ ಆರೋಗ್ಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಮೂರು ಸಂಸ್ಥೆಗಳು ಜೊತೆಗೂಡಿ ನಡೆಸಿರುವ ಕಾರ್ಯಕ್ರಮಗಳು ಜನರಿಗೆ ಅತ್ಯಂತ ಮಾದರಿಯಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಂದ ಸಮಾಜದ ಸ್ವಾಸ್ಥ್ಯ ವನ್ನು ಕಾಪಾಡಲು ಸಾಧ್ಯವಿದೆ ಎಂದರು.

ಕಾಪು ಧರಣಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಲೀಲಾಧರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಳತ್ತೂರು ಕೊಟ್ಟಾರಿಕಟ್ಟೆ ಅಶ್ವಥಕಟ್ಟೆಯ ಸಂಚಾಲಕ ರಾಘವೇಂದ್ರ ಭಟ್ ಕಳತ್ತೂರು ಮತ್ತು ಪರ್ಕಳ ಬಳಕೆದಾರರ ವೇದಿಕೆಯ ಅಜೀವ ಗೌರವಾಧ್ಯಕ್ಷ ಅಬೂಬಕ್ಕರ್ ಪರ್ಕಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‍ನ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರಹ್ಮಾನ್, ಮಾರ್ಕೆಟಿಂಗ್ ಪ್ರಬಂಧಕ ರಾಘವೇಂದ್ರ ನಾಯಕ್, ಚಾರಿಟಿ ಇನ್ ಚಾರ್ಜ್ ತಂಝೀಮ್ ಶಿರ್ವ, ಅಬ್ದುಲ್ ರಶೀದ್ ಸಖಾಫಿ ಅತಿಥಿಗಳಾಗಿ ಭಾಗವಹಿಸಿದ್ದರು.

ಸಾಧಕರಾದ ಹೃದ್ರೋಗ ತಜ್ಞ ಡಾ. ಅಬ್ದುಲ್ ರಝಾಕ್ ಕರಂದಾಡಿ, ಜೈಂಟ್ ಇಂಟರ್ ನ್ಯಾಶನಲ್ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಎನ್. ಶೆಟ್ಟಿ, ಗೃಹರಕ್ಷಕದಳದ ಘಟಕಾಧಿಕಾರಿ ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀ ನಾರಾಯಣ ರಾವ್ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.

ಸಮಾಜ ಸೇವಾ ವೇದಿಕೆಯ ಸಂಚಾಲಕ ದಿವಾಕರ ಡಿ. ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಧ್ಯಕ್ಷ ಮಹಮ್ಮದ್ ಫಾರೂಕ್ ಚಂದ್ರನಗರ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News