ಪಂಜ್ಶಿರ್: 8 ತಾಲಿಬಾನ್‌ ಸದಸ್ಯರ ಹತ್ಯೆ

Update: 2021-08-31 18:06 GMT
File Photo : PTI

ಕಾಬೂಲ್, ಆ.31: ಕಾಬೂಲ್ನ ಉತ್ತರದಲ್ಲಿರುವ ಪಂಜ್ಶಿರ್ ಪ್ರಾಂತ್ಯದಲ್ಲಿ ಸೋಮವಾರ ರಾತ್ರಿ ನಡೆದ ಹೋರಾಟದಲ್ಲಿ ತಾಲಿಬಾನ್‌ ನ 8 ಸದಸ್ಯರನ್ನು ಹತ್ಯೆ ಮಾಡಿರುವುದಾಗಿ ತಾಲಿಬಾನ್ ವಿರೋಧಿ ಪಡೆ ಹೇಳಿದೆ.

ಅಫ್ಗಾನ್ ಮೇಲೆ ತಾಲಿಬಾನ್ಗಳು ನಿಯಂತ್ರಣ ಸಾಧಿಸಿದ್ದರೂ ಪಂಜ್ಶಿರ್ ಪ್ರಾಂತ್ಯ ಮಾತ್ರ ತಾಲಿಬಾನ್ಗಳ ವಶಕ್ಕೆ ಬಂದಿಲ್ಲ. ನೆರೆಯ ಬಘ್ಲಾನ್ ಪ್ರಾಂತ್ಯದಲ್ಲೂ ತಾಲಿಬಾನ್-ವಿರೋಧಿ ಬಣದ ಪಡೆಗಳ ಮಧ್ಯೆ ಭೀಕರ ಸಂಘರ್ಷ ಮುಂದುವರಿದಿದೆ. 

ಪಂಜ್ಶಿರ್ ಕಣಿವೆಯ ಪಶ್ಚಿಮ ದ್ವಾರದ ಬಳಿ ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್(ತಾಲಿಬಾನ್ ವಿರೋಧಿ ಬಣದ ಮುಖ್ಯಸ್ಥ ಅಹ್ಮದ್ ಮಸೂದ್ಗೆ ನಿಷ್ಟವಾಗಿರುವ ಪಡೆ)ನ ಮೇಲೆ ತಾಲಿಬಾನ್ಗಳು ದಾಳಿ ನಡೆಸಿದಾಗ ಘರ್ಷಣೆ ಆರಂಭವಾಗಿದೆ. ಈ ಸಂಘರ್ಷದಲ್ಲಿ 8 ತಾಲಿಬಾನ್ಗಳು ಹತ್ಯೆಯಾಗಿ ಅಷ್ಟೇ ಮಂದಿ ಗಾಯಗೊಂಡಿದ್ದಾರೆ. ತಮ್ಮ ಪಡೆಯಲ್ಲೂ ಇಬ್ಬರು ಗಾಯಗೊಂಡಿದ್ದಾರೆ ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್ನ ವಕ್ತಾರ ಫಹೀಂ ದಾಸ್ತಿ ಹೇಳಿದ್ದಾರೆ.

ಮಾಜಿ ಸೋವಿಯತ್ ವಿರೋಧಿ ಮುಜಾಹಿದೀನ್ ಪಡೆಯ ಕಮಾಂಡರ್ ಆಗಿದ್ದ ಅಹ್ಮದ್ ಶಾ ಮಸೂದ್ ಪುತ್ರನಾಗಿರುವ ಅಹ್ಮದ್ ಮಸೂದ್, ಪಂಜ್ಶಿರ್ನಲ್ಲಿ ನೆಲೆಸಿದ್ದು ಸಾವಿರಾರು ಸ್ಥಳೀಯ ಹೋರಾಟಗಾರರ ಪಡೆಯೊಂದು ಇವರ ಬಳಿಯಿದೆ. ಪಂಜ್ಶಿರ್ ಕೈವಶ ಮಾಡಿಕೊಳ್ಳಲು ತಾಲಿಬಾನ್ ಬೃಹತ್ ಸಂಖ್ಯೆಯ ಪಡೆಯನ್ನು ರವಾನಿಸಿದ್ದರೂ, ಹೋರಾಟದ ಬದಲು ಶಾಂತಿ ಒಪ್ಪಂದದ ಬಗ್ಗೆ ಎರಡೂ ತಂಡಗಳು ಮಾತುಕತೆಗೆ ನಿರ್ಧರಿಸಿವೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News