ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ: ಯತಿ ನರಸಿಂಗಾನಂದ ವಿರುದ್ಧ ಮೂರು ಎಫ್‍ಐಆರ್ ದಾಖಲು

Update: 2021-09-01 07:36 GMT
Photo: Screengrab

ಹೊಸದಿಲ್ಲಿ: ಹಿಂದು ಮಹಿಳೆಯರು ಹಾಗೂ ಮಹಿಳಾ ರಾಜಕಾರಣಿಗಳ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಗಾನಂದ್ ಸರಸ್ವತಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಮೂರು ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ ಅರ್ಚಕ ದೇವಸ್ಥಾನದೊಳಗೆ ಕುಳಿತುಕೊಂಡು ಹಿಂದು ಮಹಿಳೆಯರು ಇತರ ಧರ್ಮದ ಜನರೊಂದಿಗೆ ಹೊಂದಿರುವ ಸಂಬಂಧಗಳ ಕುರಿತಂತೆ ನಿಂದನಾತ್ಮಕವಾಗಿ ಮಾತನಾಡುತ್ತಿರುವ ವೀಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತ್ತು. ಇದರ ಬೆನ್ನಲ್ಲೇ  ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಅವರು ನೀಡಿದ ಸೂಚನೆಯ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಸೂಕ್ತ ತನಿಖೆ ಪೂರ್ಣಗೊಂಡ ನಂತರ  ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು  ಪೊಲೀಸರು ತಿಳಿಸಿದ್ದಾರೆ.

ರೇಖಾ ಶರ್ಮ ತಮ್ಮ ಟ್ವೀಟ್‍ನಲ್ಲಿ ಆರೋಪಿ ಅರ್ಚಕನ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸುವಂತೆ ಸೂಚಿಸಿದ್ದರು.

ತಮ್ಮ  ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿ ವೀಡಿಯೋ ಶೇರ್ ಮಾಡಿರುವ ಆರೋಪಿ ಅರ್ಚಕ, ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಹಾಗೂ ವೀಡಿಯೋವನ್ನು ತಿರುಚಲಾಗಿದೆ ಎಂದು ದೂರಿದ್ದಾರೆ. ಆದರೆ ಶೇರ್ ಮಾಡಲಾದ ವೀಡಿಯೋ ಫೇಸ್ ಬುಕ್ ಲೈವ್ ವೀಡಿಯೋ ಆಗಿದ್ದರಿಂದ ಅದನ್ನು ತಿರುಚಿರುವ ಸಾಧ್ಯತೆ ಕಡಿಮೆ ಎಂದು ಕೆಲವರು ಹೇಳಿದ್ದಾರೆ.

ಈ ಹಿಂದೆ ಆರೋಪಿ ಅರ್ಚಕನ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ಬೆಂಬಲಿಸುತ್ತಿದ್ದ ಬಿಜೆಪಿ ನಾಯಕರು ಇದೀಗ ಆತನಿಂದ ದೂರ ಸರಿದು ನಿಂತಿದ್ದಾರೆ. ಅರ್ಚಕನಿಗಾಗಿ ಈ ಹಿಂದೆ ರೂ 25 ಲಕ್ಷ ಸಂಗ್ರಹಿಸಿದ್ದ ದಿಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಇದೀಗ ನರಸಿಂಗಾನಂದ್‍ನನ್ನು ಬಂಧಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಪ್ರವಾದಿ ಹಾಗೂ ಇಸ್ಲಾಂ ವಿರುದ್ಧದ ನಿಂದನಾತ್ಮಕ ಹೇಳಿಕೆಗೆ ಈ ಹಿಂದೆ ನರಸಿಂಗಾನಂದ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News