ನೆಹರು-ಗಾಂಧಿ ಕುಟುಂಬದ ಕುರಿತು 'ಮಾನಹಾನಿಕರ' ವೀಡಿಯೊ: ನಟಿ ಪಾಯಲ್ ರೋಹಟಗಿ ವಿರುದ್ಧ ಎಫ್ಐಆರ್
ಮುಂಬೈ: ನೆಹರು-ಗಾಂಧಿ ಕುಟುಂಬದ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವಹೇಳನಕಾರಿ ವೀಡಿಯೊವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಪುಣೆಯಲ್ಲಿ ನಟಿ ಪಾಯಲ್ ರೋಹಟಗಿ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾಗಿದೆ.
ಈ ಸಂಬಂಧ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಪುಣೆ ನಗರ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ದೂರು ದಾಖಲಿಸಿದ್ದಾರೆ.
36 ವರ್ಷದ ನಟಿಯ ವಿರುದ್ದ ಈ ಹಿಂದೆ ದೇಶದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಲಾಗಿದೆ ಹಾಗೂ ಪ್ರಕರಣಗಳ ನೋಂದಣಿಯ ನಂತರ ಕ್ರಮವನ್ನು ಎದುರಿಸಿದ್ದಾರೆ.
"ಪಾಯಲ್ ರೋಹಟಗಿ ಪದೇ ಪದೇ ನೆಹರು ಗಾಂಧಿ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅಂತಹ ಒಂದು ಪೋಸ್ಟ್ ಅನ್ನು ನಾವು ನೋಡಿದ್ದೇವೆ, ಅದನ್ನು ಇತ್ತೀಚೆಗೆ ಮಾಡಲಾಗಿದೆ ಎಂದು ನಾವು ಭಾವಿಸಿದ್ದೇವೆ’’ ಎಂದು ಪುಣೆ ನಗರದ ಕಾಂಗ್ರೆಸ್ ವಕ್ತಾರ ರಮೇಶ್ ಅಯ್ಯರ್ ಹೇಳಿದ್ದಾರೆ.
ಪುಣೆ ನಗರ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಾದ ರಮೇಶ್ ಬಾಗ್ವೆ, ಮೋಹನ್ ಜೋಶಿ, ದತ್ತ ಬಹಿರತ್, ಸಂಗೀತಾ ತಿವಾರಿ ಅವರೊಂದಿಗೆ ಸೈಬರ್ ಅಪರಾಧ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿದ್ದೇನೆ. ಈ ಪ್ರಕರಣದಲ್ಲಿ ಔಪಚಾರಿಕ ದೂರನ್ನು ಸಂಗೀತ ತಿವಾರಿ ನೀಡಿದ್ದಾರೆ. ಪೊಲೀಸರು ಅದರ ಮೇಲೆ ಕ್ರಮ ಕೈಗೊಂಡಿದ್ದಾರೆ ಮತ್ತು ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ರಮೇಶ್ ಹೇಳಿದ್ದಾರೆ.