ಉಡುಪಿ ಜಿಲ್ಲೆ: 9ನೆ ತರಗತಿಯಿಂದ ಪಿಯುವರೆಗೆ ತರಗತಿಗಳು ಆರಂಭ
ಉಡುಪಿ, ಸೆ.1: ಉಡುಪಿ ಜಿಲ್ಲೆಯಾದ್ಯಂತ ಇಂದಿನಿಂದ 9ನೆ ತರಗತಿಯಿಂದ ದ್ವೀತಿಯ ಪಿಯುಸಿವರೆಗಿನ ಭೌತಿಕ ತರಗತಿಗಳು ಕೋವಿಡ್ ಮಾರ್ಗಸೂಚಿಯೊಂದಿಗೆ ಪ್ರಾರಂಭಗೊಂಡಿವೆ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕೂರ್ಮ ರಾವ್ ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ತರಗತಿಗಳನ್ನು ಪರಿಶೀಲನೆ ನಡೆಸಿ, ಮಕ್ಕಳ ಅಭಿಪ್ರಾಯಗಳನ್ನು ಪಡೆದು ಕೊಂಡರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ ಉಪಸ್ಥಿತರಿದ್ದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಅಧಿಕಾರಿ ಸ್ವೀಕರಿಸಿದ ಮೊದಲೇ ದಿನವೇ ನೇರವಾಗಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳ ಅನುಭವ ಕೇಳುವುದಕ್ಕೆ ಅವಕಾಶ ಸಿಕ್ಕಿದೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ. ಎಲ್ಲ ಶಾಲೆಗಳಲ್ಲೂ ಮಕ್ಕಳ ಸುರಕ್ಷತೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿದೆ ಎಂದರು.
ಪೋಷಕರು ಶಿಕ್ಷರ ಮೇಲಿನ ವಿಶ್ವಾಸದಿಂದ ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳುಹಿಸಿಕೊಟ್ಟಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಪಾಡಿಕೊಂಡು ತರಗತಿಗೆ ಹಾಜರಾಗಿದ್ದಾರೆ. ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 236 ಮಕ್ಕಳ ಪೈಕಿ 205 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ಅದೇ ರೀತಿ ಕಾಲೇಜಿನಲ್ಲಿ ಶೇ.70 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಅವರು ಹೇಳಿದರು.
ಸದ್ಯ ಜಿಲ್ಲೆಯ ಪಾಸಿಟಿವಿಟಿ ದರಕ್ಕೆ ಅನುಗುಣವಾಗಿ 9ರಿಂದ ಪಿಯುಸಿವರೆಗಿನ ತರಗತಿಗಳನ್ನು ಆರಂಭಿಸಲಾಗಿದೆ. ಮುಂದೆ ವಿದ್ಯಾರ್ಥಿಗಳ ಹಾಜರಾತಿ, ಶಿಕ್ಷಕರು, ಪೋಷಕರ ಅಭಿಪ್ರಾಯಗಳನ್ನು ಪಡೆದು, ಸರಕಾರದ ಮಾರ್ಗಸೂಚಿಗೆ ಅನು ಗುಣವಾಗಿ 6ರಿಂದ 8ನೇ ತರಗತಿಯನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ವಿಕೇಂಡ್ ಕರ್ಫ್ಯೂಗೆ ಸರಕಾರ ಆದೇಶ
ಉಡುಪಿ ಜಿಲ್ಲೆಯಾದ್ಯಂತ ವಿಕೇಂಡ್ ಕರ್ಫ್ಯೂ ಜಾರಿಗೊಳಿಸಲು ರಾಜ್ಯ ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರ ಪಾಲನೆ ಬಗ್ಗೆ ಎಲ್ಲರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ತಿಳಿಸಿದರು.
ಜಿಲ್ಲೆಯಲ್ಲಿ ಕೊರೋನ ಸವಾಲು ಎದುರಿಸಲು ಜನರ ಭಾವನೆಗಳು, ಜನಪ್ರತಿನಿಧಿಗಳ ಅಭಿಪ್ರಾಯ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಜನರೊಂದಿಗೆ ನೇರವಾಗಿ ಮಾತನಾಡಿ ತಳ ಮಟ್ಟದಲ್ಲಿ ಯಾವ ಸ್ಥಿತಿ ಇದೆ ಎಂಬುದನ್ನು ತಿಳಿದುಕೊಳ್ಳಲಾಗುವುದು. ಲಸಿಕೆ ಪಡೆಯಲು ಅರ್ಹರಾಗಿರುವ ಎಲ್ಲರಿಗೂ ಲಸಿಕೆ ನೀಡಲು ಶ್ರಮ ವಹಿಸಲಾಗುವುದು. ಇದಕ್ಕೆ ಇಡೀ ತಂಡ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.