ಬಾಬರ್‌ ನ ಕಟ್ಟಡ ಕೆಡವಿದಂತೆ ಮಥುರಾದಲ್ಲಿರುವ 'ಸಣ್ಣ ಕಟ್ಟಡಗಳನ್ನʼ ಕೆಡವಿ ಮಂದಿರ ನಿರ್ಮಿಸಲಾಗುವುದು: ಬಿಜೆಪಿ ಶಾಸಕ

Update: 2021-09-01 11:46 GMT
Photo: Facebook/@RajaSinghOfficial

ಲಖನೌ: ಮಥುರಾದಲ್ಲಿ ಶ್ರೀಕೃಷ್ಣ ಹಾಗೂ  ಕಾಶಿಯಲ್ಲಿ ಭಗವಾನ್ ಶಿವನ ಭವ್ಯ ದೇವಾಲಯಗಳನ್ನು ನಿರ್ಮಿಸಲು ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ರಾಜಾ ಸಿಂಗ್ ಕರೆ ನೀಡಿದ್ದಾರೆ. 

ಮಥುರಾದಲ್ಲಿನ ಮಸೀದಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವ ಬಿಜೆಪಿ ಶಾಸಕರು, ʼಸಣ್ಣ ಕಟ್ಟಡಗಳನ್ನುʼ ಕೆಡವಲಾಗುವುದು ಹಾಗೂ  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಮಥುರಾದಲ್ಲಿ ಕೃಷ್ಣನ ಮಂದಿರವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ತನ್ನ ವೀಡಿಯೊವನ್ನು ಬಿಡುಗಡೆ ಮಾಡಿದ ರಾಜಾ ಸಿಂಗ್, ರಾಮ ಮಂದಿರದಿಂದ ‘ಏಕ್ ಝಾಂಕಿ ಹೈ, ಕಾಶಿ, ಮಥುರಾ ಅಭಿ ಬಾಕಿ ಹೈ’ ಎಂದು ಹೇಳಿದರು. ಬಾಬರ್ ನ ಕಟ್ಟಡವನ್ನು ಕೆಡವಿದಂತೆಯೇ, ಮಥುರಾದಲ್ಲಿ ಸಣ್ಣ ಕಟ್ಟಡಗಳನ್ನು ನಾಶಪಡಿಸಲಾಗುವುದು ಹಾಗೂ ಶ್ರೀಕೃಷ್ಣನ ಭವ್ಯವಾದ ದೇವಸ್ಥಾನವನ್ನು ನಿರ್ಮಿಸಲಾಗುವುದು. ಮಥುರಾದ ಶ್ರೀಕೃಷ್ಣನ ಭವ್ಯ ಮಂದಿರವು ದೇಶವಾಸಿಗಳ ಹಾಗೂ  ಕೃಷ್ಣ ಭಕ್ತರ ಆಶಯವಾಗಿದೆ ಎಂದು ಅವರು ಹೇಳಿದರು.

ಆದಿತ್ಯನಾಥ್ ಅವರ ನಾಯಕತ್ವದಲ್ಲಿ, ಮಥುರಾದಲ್ಲಿನ ಎಲ್ಲಾ ಸಣ್ಣ ಕಟ್ಟಡಗಳನ್ನು ನಾಶಪಡಿಸಲಾಗುವುದು ಹಾಗೂ  ಶ್ರೀಕೃಷ್ಣನ ಜನ್ಮಸ್ಥಾನದಲ್ಲಿ ಭವ್ಯವಾದ ದೇವಸ್ಥಾನವನ್ನು ನಿರ್ಮಿಸಲಾಗುವುದು ಎಂದು ಬಿಜೆಪಿ ಶಾಸಕ ಹೇಳಿದರು.

ಕಾಶಿಯಲ್ಲಿ ಶಿವನ ದೇವಸ್ಥಾನವನ್ನು ನಿರ್ಮಿಸಬೇಕೆಂದು ರಾಜಾ ಪ್ರತಿಪಾದಿಸಿದರು. ಉತ್ತರಪ್ರದೇಶ ಬಿಜೆಪಿ ಶಾಸಕರ ಹೇಳಿಕೆಗಳು 2022 ರ ಆರಂಭದಲ್ಲಿ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ರಾಜಕೀಯ ಕಾವು  ಹೆಚ್ಚಿಸುವ ನಿರೀಕ್ಷೆಯಿದೆ. ಇಲ್ಲಿಯವರೆಗೆ, ಯಾವುದೇ ವಿರೋಧ ಪಕ್ಷವೂ ಸಿಂಗ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿಲ್ಲ. ಮಥುರಾದಲ್ಲಿ ಕೃಷ್ಣನ ಜನ್ಮಸ್ಥಳದ ಪಕ್ಕದಲ್ಲಿರುವ ಈದ್ಗಾ ಮಸೀದಿ 'ಕಾನೂನುಬಾಹಿರ' ಎಂದು ಅನೇಕ ಸಂಘಪರಿವಾರ ಸಂಘಟನೆಗಳು ಹೇಳಿಕೊಂಡಿರುವುದನ್ನು ಗಮನಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News