ಪುತ್ತೂರು: ಎಸ್‍ಐಗೆ ಗುಂಡು ಹಾರಿಸಿದ ಪ್ರಕರಣದ ಓರ್ವ ಆರೋಪಿಗೆ ಜಾಮೀನು ಮಂಜೂರು
ಪುತ್ತೂರು: ಕಳೆದ ಮಾರ್ಚ್ ತಿಂಗಳಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಠಾಣಾ ಎಸ್‍ಐ ಮೇಲೆ ಗುಂಡು ಹಾರಿಸಿ ಕೊಲೆ ಯತ್ನ ನಡೆಸಿದ ಪ್ರಕರಣ ಎದುರಿಸುತ್ತಿದ್ದ ಆರೋಪಿಗಳ ಪೈಕಿ ಓರ್ವ ಆರೋಪಿಗೆ ಮಂಗಳೂರು ಜಿಲ್ಲಾ ಮತ್ತು ಸಷೆನ್ಸ್ ನ್ಯಾಯಾಲಯ ಶರತ್ತುಬದ್ಧ ಜಾಮೀನು ಮಂಜೂರುಗೊಳಿಸಿದೆ.
ಪ್ರಕರಣ ಎದುರಿಸುತ್ತಿರುವ 7 ಮಂದಿ ಆರೋಪಿಗಳ ಪೈಕಿ ಕೇರಳ ರಾಜ್ಯದ ಉಪ್ಪಳ ನಿವಾಸಿ ಹೈದರ್ ಎಂಬಾತನಿಗೆ ಜಾಮೀನು ಮಂಜೂರುಗೊಳಿಸಲಾಗಿದೆ.
ಕಳೆದ ಮಾ. 25ರಂದು ಬೆಳಗ್ಗಿನ ಜಾವ 4 ಗಂಟೆಗೆ ಬಂಟ್ವಾಳ ತಾಲೂಕಿನ ಬಾಕ್ರಬೈಲು ಕಡೆಯಿಂದ ಸಾಲೆತ್ತೂರು ಕಡೆಗೆ ಬಿಳಿ ಬಣ್ಣದ ಕಾರು ಆಗಮಿಸುತ್ತಿದ್ದು ಈ ಕಾರನ್ನು ನಿಲ್ಲಿಸುವಂತೆ ಅಂದಿನ ವಿಟ್ಲ ಠಾಣಾ ಎಸ್‍ಐ ಆಗಿದ್ದ ವಿನೋದ್ ರೆಡ್ಡಿ ಮತ್ತು ಸಿಬ್ಬಂದಿಗಳು ಸೂಚನೆ ನೀಡಿದಾಗ ಕಾರಿನ ಹಿಂದಿನ ಸೀಟಿನಲ್ಲಿದ್ದ ವ್ಯಕ್ತಿಯು ಪಿಸ್ತೂಲಿನಿಂದ ಎಸ್‍ಐ ಅವರ ಕಡೆಗೆ ಗುರಿಯಿಟ್ಟು ಗುಂಡು ಹಾರಾಟ ನಡೆಸಿದ್ದ, ತಕ್ಷಣವೇ ಎಸ್‍ಐ ಅವರು ಗುಂಡಿನಿಂದ ತಪ್ಪಿಸಿಕೊಂಡಿದ್ದರು. ಬಳಿಕ ಕಾರು ವೇಗವಾಗಿ ಚಲಿಸಿ ರಸ್ತೆ ಬದಿಯಲ್ಲಿದ್ದ ಬ್ಯಾರಿಕೇಡ್‍ಗೆ ಢಿಕ್ಕಿಯಾಗಿ ರಸ್ತೆ ಬದಿಯಲ್ಲಿನ ಕೆಸರಿನಲ್ಲಿ ಚಕ್ರ ಹೂತು ಬಾಕಿಯಾಗಿತ್ತು. ಕಾರಿನಲ್ಲಿದ್ದವರು ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನ ನಡೆಸಿದಾಗ ಆರೋಪಿಗಳ ಪೈಕಿ ಮೂವರನ್ನು ಬೆನ್ನಟ್ಟಿದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಎ.5ರಂದು ಉಳಿದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಬಂಧಿತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು. ಈ ಪೈಕಿ ಓರ್ವ ಆರೋಪಿ ಹೈದರ್ ಎಂಬಾತನಿಗೆ ಇದೀಗ ಜಾಮೀನು ದೊರಕಿದೆ.
ಆರೋಪಿಯ ಪರವಾಗಿ ಪುತ್ತೂರಿನ ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಾದಿಸಿದ್ದರು.