ಗುಲ್ವಾಡಿ: ಕಟ್ಟಡ ಕಾರ್ಮಿಕರ ಅಂಚೆ ಕಾರ್ಡ್ ಚಳವಳಿ
ಕುಂದಾಪುರ, ಸೆ.1: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನ್ಯಾಯಾಂಗದ ನಿರ್ದೇಶನಗಳನ್ನು ಉಲ್ಲಂಘಿಸಿ ಶಾಸಕರಿಗೆ ಮತ್ತು ಆಡಳಿತರೂಢ ರಾಜಕೀಯ ಪಕ್ಷದ ಬೆಂಬಲಿಗರಿಗೆ ಹಾಗೂ ಬೋಗಸ್ ಕಾರ್ಡುದಾರರಿಗೂ ಆಹಾರ ಕಿಟ್ಗಳನ್ನು ನೀಡಿ ಎಸಗಿರುವ ಕೋಟ್ಯಂತರ ರೂ. ಭ್ರಷ್ಟಚಾರದ ತನಿಖೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಐಟಿಯು) ಗುಲ್ವಾಡಿ ಘಟಕದ ವತಿಯಿಂದ ಅಂಚೆ ಕಾರ್ಡ್ ಚಳವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಮಂಡಳಿಯು 2021-2022ನೇ ಸಾಲಿನಲ್ಲಿ ಕಾರ್ಮಿಕರಿಗೆ ಮೀಸಲಿರುವ ಹಣವನ್ನು ವಾಹನ ಖರೀದಿ, ಕಟ್ಟಡ ನಿರ್ಮಾಣ ವ್ಯವಹಾರ ಸೇರಿದಂತೆ ಅನ್ಯ ಉದ್ದೇಶಗಳಿಗೆ 2066:90 ಕೋಟಿ ಹಣ ಖರ್ಚು ಮಾಡುತ್ತಿದ್ದು ಈ ವಿಚಾರ ದಲ್ಲಿ ನ್ಯಾಯಾಲಯ ಮದ್ಯೆ ಪ್ರವೇಶಿಸಬೇಕೆಂದು ಒತ್ತಾಯಿಸಿ ಕಾನೂನು ಸೇವೆಗಳ ಪ್ರಾಧಿಕಾರ, ಮುಖ್ಯಮಂತ್ರಿಗಳಿಗೆ, ಕಾರ್ಮಿಕ ಸಚಿವರಿಗೆ, ಸರಕಾರದ ಮುಖ್ಯಕಾರ್ಯದರ್ಶಿಗಳಿಗೆ ಒಂದು ಲಕ್ಷ ಅಂಚೆ ಪತ್ರಗಳನ್ನು ರವಾನಿಸಿ ಚಳುವಳಿ ನಡೆಸಲಾಗುತ್ತಿದೆ.
ಗುಲ್ವಾಡಿಯಲ್ಲಿ ಆರಂಭಿಸಿದ ಚಳವಳಿಯಲ್ಲಿ ಗುಲ್ವಾಡಿ ಘಟಕದ ಅಧ್ಯಕ್ಷ ಅಬ್ಬಾಸ್, ಕಾರ್ಯದರ್ಶಿ ಅಣ್ಣಪ್ಪ ಅಬ್ಬಿಗುಡ್ಡಿ, ಜಮಾಲ್ ಮೊದಲಾದವರು ಭಾಗವಹಿಸಿದ್ದರು. ಮುಂದೆ ಕುಂದಾಪುರದ ಎಲ್ಲಾ ಗ್ರಾಮಗಳಲ್ಲಿಯೂ ಅಂಚೆ ಕಾರ್ಡ್ ಚಳವಳಿ ನಡೆಸಲಾಗುವುದು ಎಂದು ಸಿಐಟಿಯು ಮುಖಂಡರು ತಿಳಿಸಿದ್ದಾರೆ.