ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ, ಗೋರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕಾಗಿಸಬೇಕು: ಅಲಹಾಬಾದ್‌ ಹೈಕೋರ್ಟ್

Update: 2021-09-01 14:37 GMT

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಮತ್ತು ಗೋವಿನ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕಾಗಿರಿಸಿಕೊಳ್ಳಬೇಕು ಎಂದು ಹೇಳಿದ ಅಲಹಾಬಾದ್ ಹೈಕೋರ್ಟ್ ಗೋಹತ್ಯೆ ಮಾಡಿದ ಆರೋಪ ಹೊತ್ತಿರುವ ಜಾವೇದ್ ಎಂಬಾತನಿಗೆ ಜಾಮೀನು ನಿರಾಕರಿಸಿದೆ.

"ಒಂದು ದೇಶದ ಸಂಸ್ಕೃತಿ ಮತ್ತು ಅದರ ನಂಬಿಕೆಗೆ ಧಕ್ಕೆಯುಂಟಾದಾಗ, ದೇಶ ದುರ್ಬಲವಾಗುತ್ತದೆ ಎಂದು ನಮಗೆ ತಿಳಿದಿದೆ" ಎಂದು ಕೋರ್ಟ್ ಹೇಳಿದೆ.

ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಮೂರ್ತಿ ಶೇಖರ್ ಯಾದವ್ ಅವರ ಪೀಠವು "ಅರ್ಜಿದಾರರು ಹಸುವನ್ನು ಕಳ್ಳತನ ಮಾಡಿದ ನಂತರ ಅದನ್ನು ಕೊಂದು, ಅದರ ತಲೆ ಕತ್ತರಿಸಿದ್ದು ಮತ್ತು ಅದರ ಮಾಂಸವನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದರು" ಎಂದು ಹೇಳಿದರು.

"ಇದು ಅರ್ಜಿದಾರರ ಮೊದಲ ಅಪರಾಧವಲ್ಲ, ಈ ಅಪರಾಧದ ಮುಂಚೆಯೇ, ಅವರು ಗೋಹತ್ಯೆಯನ್ನು ಮಾಡಿದ್ದರು, ಇದು ಸಮಾಜದ ಸಾಮರಸ್ಯವನ್ನು ಕದಡಿದೆ", ಅರ್ಜಿದಾರರು ಜಾಮೀನಿನ ಮೇಲೆ ಬಿಡುಗಡೆಯಾದರೆ, ಅವರು ಮತ್ತೊಮ್ಮೆ ಈ ಕೃತ್ಯವನ್ನು ಮಾಡುತ್ತಾರೆ. ಅದು ಸಮಾಜದ ಪರಿಸರವನ್ನು ಹಾಳು ಮಾಡುತ್ತದೆ ಎಂದು ಹೇಳಿದರು.

ಆರೋಪಿಯ ಮೇಲೆ ಐಪಿಸಿ ಸೆಕ್ಷನ್ 379 (ಕಳ್ಳತನದ ಶಿಕ್ಷೆ) ಮತ್ತು ಗೋಹತ್ಯೆ ತಡೆ ಕಾಯಿದೆಯ ಸೆಕ್ಷನ್ 3, 5, 8 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ನ್ಯಾಯಾಲಯವು ಈ ಕೆಳಗಿನ ಹೇಳಿಕೆಗಳನ್ನು ನೀಡಿದೆ:

ಮೂಲಭೂತ ಹಕ್ಕು ಕೇವಲ ಗೋಮಾಂಸ ಭಕ್ಷಕರ ಪರಮಾಧಿಕಾರವಲ್ಲ, ಬದಲಿಗೆ, ಹಸುವನ್ನು ಪೂಜಿಸುವವರು ಮತ್ತು ಆರ್ಥಿಕವಾಗಿ ಗೋವುಗಳ ಮೇಲೆ ಅವಲಂಬಿತರಾಗಿರುವವರು, ಅರ್ಥಪೂರ್ಣ ಜೀವನವನ್ನು ನಡೆಸುವ ಹಕ್ಕನ್ನು ಹೊಂದಿದ್ದಾರೆ.

ಜೀವಿಸುವ ಹಕ್ಕು ಕೊಲ್ಲುವ ಹಕ್ಕಿಗಿಂತಲೂ ಮೇಲಿದೆ ಮತ್ತು ಗೋಮಾಂಸ ತಿನ್ನುವ ಹಕ್ಕನ್ನು ಎಂದಿಗೂ ಮೂಲಭೂತ ಹಕ್ಕು ಎಂದು ಪರಿಗಣಿಸಲಾಗದು.

ಹಸು ವಯಸ್ಸಾದಾಗ ಮತ್ತು ಅನಾರೋಗ್ಯದಿಂದ ಇರುವಾಗಲೂ ಕೂಡ ಉಪಯುಕ್ತವಾಗಿದೆ, ಮತ್ತು ಅದರ ಸಗಣಿ ಮತ್ತು ಮೂತ್ರವು ಕೃಷಿಗೆ, ಔಷಧಿಗಳ ತಯಾರಿಕೆಗೆ ತುಂಬಾ ಉಪಯುಕ್ತವಾಗಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ವಯಸ್ಸಾದಾಗ ಅಥವಾ ಅನಾರೋಗ್ಯಕ್ಕೆ ಒಳಗಾದಾಗಲೂ ಹಸುವನ್ನು ತಾಯಿಯಂತೆ ಪೂಜಿಸಲಾಗುವುದು. ಹಸುವನ್ನು ಕೊಲ್ಲುವ ಹಕ್ಕನ್ನು ಯಾರಿಗೂ ನೀಡಲಾಗುವುದಿಲ್ಲ.

ಗೋವುಗಳ ಮಹತ್ವವನ್ನು ಕೇವಲ ಹಿಂದೂಗಳು ಮಾತ್ರ ಅರ್ಥಮಾಡಿಕೊಂಡಿರುವುದಲ್ಲ, ಮುಸ್ಲಿಮರು ತಮ್ಮ ಆಳ್ವಿಕೆಯಲ್ಲಿ ಗೋವನ್ನು ಭಾರತದ ಸಂಸ್ಕೃತಿಯ ಪ್ರಮುಖ ಭಾಗವೆಂದು ಪರಿಗಣಿಸಿದ್ದಾರೆ. 5 ಮುಸ್ಲಿಂ ಆಡಳಿತಗಾರರು ಗೋಹತ್ಯೆಯನ್ನು ನಿಷೇಧಿಸಿದ್ದರು. ಬಾಬರ್, ಹುಮಾಯೂನ್ ಮತ್ತು ಅಕ್ಬರ್ ತಮ್ಮ ಧಾರ್ಮಿಕ ಹಬ್ಬಗಳಲ್ಲಿ ಹಸುಗಳನ್ನು ಬಲಿ ನೀಡುವುದನ್ನು ನಿಷೇಧಿಸಿದ್ದರು.

ಮೈಸೂರಿನ ನವಾಬ ಹೈದರ್ ಅಲಿ ಗೋಹತ್ಯೆಯನ್ನು ಶಿಕ್ಷಾರ್ಹ ಅಪರಾಧವಾಗಿಸಿದ್ದರು.

ಕಾಲಕಾಲಕ್ಕೆ, ದೇಶದ ವಿವಿಧ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟ್, ಹಸುವಿನ ಪ್ರಾಮುಖ್ಯತೆಯನ್ನು ಪರಿಗಣಿಸಿ, ಅದರ ರಕ್ಷಣೆ, ದೇಶದ ಜನರ ನಂಬಿಕೆ, ಸಂಸತ್ತು ಮತ್ತು ಶಾಸಕಾಂಗವನ್ನು ಗಮನದಲ್ಲಿಟ್ಟುಕೊಂಡು ಅನೇಕ ನಿರ್ಧಾರಗಳನ್ನು ನೀಡಿವೆ. ಹಸುಗಳ ಹಿತಾಸಕ್ತಿಗಳನ್ನು ರಕ್ಷಿಸಲು ಶಾಸಕಾಂಗವು ನೂತನ ನಿಯಮಗಳನ್ನೂ ಮಾಡಿದೆ.

ಕೆಲವೊಮ್ಮೆ ಗೋವಿನ ರಕ್ಷಣೆ ಮತ್ತು ಸಮೃದ್ಧಿಯ ಬಗ್ಗೆ ಮಾತನಾಡುವವರು ಗೋ ಭಕ್ಷಕರಾಗುವುದನ್ನು ನೋಡುವುದು ತುಂಬಾ ನೋವಿನ ಸಂಗತಿ. 

ಸರ್ಕಾರವು ಗೋಶಾಲೆಯನ್ನು ನಿರ್ಮಿಸುತ್ತದೆ, ಆದರೆ ಹಸುಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುವ ಜನರು ಹಸುವನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಇಂತಹ ಅನೇಕ ಉದಾಹರಣೆಗಳಿವೆ, ಗೋಶಾಲೆಯಲ್ಲಿ ಹಸುಗಳು ಹಸಿವಿನಿಂದ ಮತ್ತು  ರೋಗದಿಂದ ಸಾಯುತ್ತವೆ. ಆಹಾರದ ಇಲ್ಲದಿರುವಾಗ, ಹಸು ಪಾಲಿಥಿನ್ ತಿನ್ನುತ್ತದೆ ಮತ್ತು ಇದರ ಪರಿಣಾಮವಾಗಿ, ಅನಾರೋಗ್ಯಕ್ಕೆ ತುತ್ತಾಗಿ ಸಾಯುತ್ತದೆ.

ಹಾಲು ನೀಡುವುದನ್ನು ನಿಲ್ಲಿಸಿದ ಹಸುಗಳ ದಯನೀಯ ಸ್ಥಿತಿಯನ್ನು ರಸ್ತೆಗಳು ಮತ್ತು ಬೀದಿಗಳಲ್ಲಿ ಕಾಣಬಹುದು. ಅನಾರೋಗ್ಯ ಮತ್ತು ವಿರೂಪಗೊಂಡ ಹಸುಗಳನ್ನು ಹೆಚ್ಚಾಗಿ ಗಮನಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಗೋವಿನ ಸಂರಕ್ಷಣೆಯ ಕಲ್ಪನೆಯನ್ನು ಪ್ರಚಾರ ಮಾಡುವವರು ಏನು ಮಾಡುತ್ತಿದ್ದಾರೆ ಎನ್ನುವುದು ಮುಂಚೂಣಿಗೆ ಬರುತ್ತದೆ.

ಕೆಲವೊಮ್ಮೆ ಒಂದೆರಡು ಹಸುಗಳೊಂದಿಗೆ ಫೋಟೊ ತೆಗೆಯುವ ಮೂಲಕ ಜನರು ತಮ್ಮ ಕೆಲಸ ಮುಗಿದಿದೆ ಎಂದು ಭಾವಿಸುತ್ತಾರೆ, ಆದರೆ ಅದು ಹಾಗಲ್ಲ. ಹಸುವನ್ನು ರಕ್ಷಿಸಬೇಕು ಮತ್ತು ಪ್ರಾಮಾಣಿಕ ಹೃದಯದಿಂದ ನೋಡಿಕೊಳ್ಳಬೇಕು ಮತ್ತು ಸರ್ಕಾರವು ಅವುಗಳ ಕುರಿತಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.

ಹಸುಗಳ ಕಲ್ಯಾಣ ಇದ್ದಾಗ ಮಾತ್ರ ದೇಶವು ಸುರಕ್ಷಿತವಾಗಿರುತ್ತದೆ, ಮತ್ತು ಆಗ ಮಾತ್ರ ದೇಶವು ಏಳಿಗೆಯಾಗುತ್ತದೆ. ವಿಶೇಷವಾಗಿ, ಕೇವಲ ನೆಪ ಮಾತ್ರಕ್ಕೆ ಗೋವಿನ ರಕ್ಷಣೆಯ ಬಗ್ಗೆ ಮಾತನಾಡುವ ಜನರು, ಗೋ ರಕ್ಷಣೆಯ ಮೂಲಕ ದಕ್ಕುವ ಪ್ರಚಾರದ ಭರವಸೆಯನ್ನು ಬಿಟ್ಟುಬಿಡಬೇಕು.

ಸರ್ಕಾರವು ಸಂಸತ್ತಿನಲ್ಲಿ ಮಸೂದೆಯನ್ನು ತರಬೇಕು ಮತ್ತು ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಗೋವುಗಳಿಗೆ ಹಾನಿ ಮಾಡುವ ಕುರಿತು ಮಾತನಾಡುವವರ ವಿರುದ್ಧ ಕಠಿಣ ಕಾನೂನುಗಳನ್ನು ಮಾಡಬೇಕಾಗುತ್ತದೆ ಹಾಗೆಯೇ ಗೋವುಗಳನ್ನು ರಕ್ಷಿಸುತ್ತೇವೆಂದು ಪ್ರಚಾರ ಮಾಡುವವರ ವಿರುದ್ಧವೂ ಕಾನೂನು ಜಾರಿಮಾಡಬೇಕು. ಅವರಿಗೆ ಗೋವಿನ ರಕ್ಷಣೆಯೊಂದಿಗೆ ಯಾವುದೇ ಸಂಬಂಧವಿಲ್ಲ, ಗೋವಿನ ರಕ್ಷಣೆಯ ಹೆಸರಿನಲ್ಲಿ ಹಣ ಗಳಿಸುವುದು ಅವರ ಏಕೈಕ ಗುರಿಯಾಗಿದೆ.

ಗೋವಿನ ರಕ್ಷಣೆ ಮತ್ತು ಪ್ರಚಾರವು ಯಾವುದೇ ಒಂದು ಧರ್ಮಕ್ಕೆ ಸಂಬಂಧಿಸಿಲ್ಲ, ಆದರೆ ಗೋವು ಭಾರತದ ಸಂಸ್ಕೃತಿಯಾಗಿದೆ ಮತ್ತು ಧರ್ಮ ಅಥವಾ ಪೂಜೆಯ ಹೊರತಾಗಿ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಿದೆ.

ನಾವು ನಮ್ಮ ಸಂಸ್ಕೃತಿಯನ್ನು ಮರೆತಾಗ, ವಿದೇಶಿಯರು ನಮ್ಮ ಮೇಲೆ ದಾಳಿ ಮಾಡಿ ನಮ್ಮನ್ನು ಗುಲಾಮರನ್ನಾಗಿ ಮಾಡಿದರು ಮತ್ತು ಇಂದಿಗೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಅಫ್ಘಾನಿಸ್ತಾನದ ನಿರಂಕುಶ ತಾಲಿಬಾನ್ ಆಕ್ರಮಣವನ್ನು ಮರೆಯಬಾರದು ಎಂಬುದಕ್ಕೆ ನಮ್ಮ ದೇಶದಲ್ಲಿ ನೂರಾರು ಉದಾಹರಣೆಗಳಿವೆ.

ಇಡೀ ಜಗತ್ತಿನಲ್ಲಿ ಭಾರತ ಮಾತ್ರ ಏಕೈಕ ದೇಶವಾಗಿದ್ದು, ಅಲ್ಲಿ ವಿವಿಧ ಧರ್ಮಗಳ ಜನರು ವಾಸಿಸುತ್ತಾರೆ, ಅವರು ವಿಭಿನ್ನವಾಗಿ ಪೂಜಿಸಬಹುದು, ಆದರೆ ಅವರ ಆಲೋಚನೆ ದೇಶದ ವಿಚಾರದಲ್ಲಿ ಒಂದೇ ಆಗಿರುತ್ತದೆ ಮತ್ತು ಅವರು ಪರಸ್ಪರರ ಧರ್ಮಗಳನ್ನು ಗೌರವಿಸುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.

ಕೃಪೆ: livelaw.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News