ಪಾಸಿಟಿವಿಟಿ ದರದ ಆಧಾರದಲ್ಲಿ ಉಡುಪಿಯಲ್ಲಿ ವೀಕೆಂಡ್ ಕರ್ಫ್ಯೂ: ಸಚಿವ ಕೋಟ

Update: 2021-09-01 14:14 GMT

ಕುಂದಾಪುರ, ಸೆ.1: ಕೊರೋನ ಪಾಸಿಟಿವಿಟಿ ದರದ ಆಧಾರದಲ್ಲಿ ಉಡುಪಿ ಜಿಲ್ಲೆಯನ್ನು ಕೂಡ ವಾರಾಂತ್ಯದ ಕರ್ಫ್ಯೂ ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿರುವುದು ಸತ್ಯ. ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಪಾಸಿಟಿವಿಟಿ ದರ ಹೆಚ್ಚಗಾದಂತೆ ಜಾಗೃತೆ ವಹಿಸಬೇಕಿದ್ದು, ಸಿಎಂ ಹಾಗೂ ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬುಧವಾರದಂದು ಕುಂದಾಪುರ ಪ್ರವಾಸಿ ಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡುತಿದ್ದರು.

ಜಿಲ್ಲಾ ಮಟ್ಟದಲ್ಲಿ ನಡೆಯುವ ದಲಿತರ ಕುಂದು ಕೊರತೆ ಸಭೆಯನ್ನು ಶೀಘ್ರ ಮಾಡಲು ಸಿಎಂ ಸೂಚಿಸಿದ್ದಾರೆ. ಮೊದಲು ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಈ ಸಭೆಯಲ್ಲಿ ಭಾಗವಹಿಸುತ್ತಿದ್ದು, 6 ತಿಂಗಳಿಗೊಮ್ಮೆ ನಡೆಯುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಮಂಗಳವಾರ ಗ್ರಾಪಂಗಳಿಗೆ ಭೇಟಿ ನೀಡಿ ಸಂದರ್ಭದಲ್ಲಿ ಕೆಲವು ಸಮಸ್ಯೆಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಿದ್ದಾಪುರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಬಂಧಪಟ್ಟ 21 ಕೋಟಿ ಯೋಜನೆ ಸಿದ್ದಗೊಂಡಿದ್ದು, ನಿವೇಶನದ ಕೊರತೆಯಿಂದ ಅದು ನನೆ ಗುದಿಗೆ ಬಿದ್ದಿದೆ. ಇಂದು ಎಸಿ, ಡಿ.ಎಫ್‌ಒ, ತಹಶಿಲ್ದಾರ್ ಹಾಗೂ ಸಂಬಂದಪಟ್ಟ ಅಧಿಕಾರಿಗಳ ಸಭೆ ನಡೆಸಿ, ಮುಂದಿನ 15 ದಿನಗಳೊಳಗೆ ಈ ನಿವೇಶನಕ್ಕೆ ಸಂಬಂಧಿಸಿ ಅರಣ್ಯ ಇಲಾಖೆಯ ಸಮಸ್ಯೆ ಸರಿಪಡಿಸಿಕೊಂಡು ಕಟ್ಟಡ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಯಡಮೊಗೆಯಲ್ಲಿ 170 ಕುಟುಂಬಕ್ಕೆ ಹಕ್ಕುಪತ್ರ ದೊರೆತಿಲ್ಲ. ಅದಕ್ಕೆ ಪೂರಕ ದಾಖಲೆಗಳನ್ನು ಸಿದ್ಧಪಡಿಸಿ 1 ತಿಂಗಳಿನೊಳಗೆ ಸರ್ವೇ ನಡೆಸಲು ಅರಣ್ಯ, ಕಂದಾಯ ಹಾಗೂ ಸರ್ವೇ ಇಲಾಖೆಗೆ ಸೂಚಿಸಲಾಗಿದ್ದು ಈ ಸಮಸ್ಯೆ ಪರಿಹಾರ ವಾದಲ್ಲಿ ಇಲಾಖೆಗೆ ಮತ್ತು ಸಾರ್ವಜನಿಕರಿಗೆ ಅನುಕೂಲಾಗಲಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News