ಹಾಂಕಾಂಗ್: 1997ರ ಸರಕಾರಿ ವಿರೋಧಿ ಪ್ರತಿಭಟನೆ; 7 ಮಂದಿಗೆ ಜೈಲುಶಿಕ್ಷೆ

Update: 2021-09-01 16:51 GMT

ಹಾಂಕಾಂಗ್, ಸೆ.1: 2019ರಲ್ಲಿ ನಡೆದ ಸರಕಾರಿ ವಿರೋಧಿ ಪ್ರತಿಭಟನೆ ಸಂದರ್ಭ ಕಾನೂನುಬಾಹಿರವಾಗಿ ಜನರನ್ನು ಗುಂಪುಗೂಡಿಸುವ ಪ್ರಕ್ರಿಯೆಯಲ್ಲಿ ಶಾಮೀಲಾದ ಆರೋಪದಲ್ಲಿ ಪ್ರಜಾಪ್ರಭುತ್ವ ಪರ ಕಾರ್ಯಕರ್ತರು ಹಾಗೂ ಹಾಂಕಾಂಗ್ ವಿಧಾನ ಪರಿಷತ್ನ ಮಾಜಿ ಸದಸ್ಯರ ಸಹಿತ 7 ಮಂದಿಗೆ ಜೈಲುಶಿಕ್ಷೆ ವಿಧಿಸಲಾಗಿದೆ.

 ಸಿವಿಲ್ ಹ್ಯೂಮನ್ ರೈಟ್ಸ್ ಫ್ರಂಟ್ನ ಮಾಜಿ ಸಂಯೋಜಕ ಫಿಗೊ ಚ್ಯಾನ್, ಲೀಗ್ ಆಫ್ ಸೋಷಿಯಲ್ ಡೆಮೊಕ್ರಾಟ್ಸ್ ಪಕ್ಷದ ರಾಫೆಲ್ ವಾಂಗ್ ಮತ್ತು ಅವೆರಿಂಗ್, ಶಾಸನಸಭೆಯ ಮಾಜಿ ಸದಸ್ಯರಾದ ಸಿಡ್ ಹೊ, ಯುಂಗ್ ಸುಮ್, ಆಲ್ಬರ್ಟ್ ಹೊ ಮತ್ತು ಲ್ಯುಂಗ್ ಕ್ವಾಕ್ ಹಂಗ್ ಜೈಲು ಶಿಕ್ಷೆಗೆ ಗುರಿಯಾದವರು.

  2019ರಲ್ಲಿ ಸರಕಾರಿ ವಿರೋಧಿ ಪ್ರತಿಭಟನೆ ಉತ್ತುಂಗಕ್ಕೇರಿದ್ದ ಸಂದರ್ಭ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಸಾವಿರಾರು ಮಂದಿಯನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದರು. ಈ ಪ್ರತಿಭಟನೆ ಆಯೋಜಿಸುವಲ್ಲಿ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜನರನ್ನು ಪ್ರೇರೇಪಿಸಿದ ಆರೋಪ ಈ 7 ಮಂದಿಯ ಮೇಲಿತ್ತು.

  ಹಾಂಕಾಂಗ್ ನ ಮಿನಿ ಸಂವಿಧಾನದಡಿ ಗುಂಪುಗೂಡುವ ಸ್ವಾತಂತ್ರ್ಯ, ಮೆರವಣಿಗೆ, ಪ್ರತಿಭಟನೆ ನಡೆಸುವ ಸ್ವಾತಂತ್ರ್ಯವನ್ನು ಖಾತರಿಗೊಳಿಸಿದ್ದರೂ ಈ ಸ್ವಾತಂತ್ರ್ಯ ನಿರಂಕುಶ ಎಂದು ಭಾವಿಸಬಾರದು . ಜನರ ಸುರಕ್ಷತೆ, ಕಾನೂನು ಸುವ್ಯವಸ್ಥೆ ಮತ್ತು ಇತರರ ಹಕ್ಕು ಮತ್ತು ಸ್ವಾತಂತ್ರ್ಯದ ರಕ್ಷಣೆಯ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳಿವೆ ಎಂದು ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶರು ಹೇಳಿದರು.

ಇದೊಂದು ರಾಜಕೀಯ ಪ್ರೇರಿತ ಕಾನೂನು ಕ್ರಮ ಎಂದು ಎಲ್ಲರೂ ಅರ್ಥೈಸಿಕೊಳ್ಳುವುದಾಗಿ ಆಶಿಸುತ್ತೇನೆ ಎಂದು ಲೀಗ್ ಆಫ್ ಸೋಶಿಯಲ್ ಡೆಮೊಕ್ರಾಟ್ಸ್ ನ ಅಧ್ಯಕ್ಷೆ ಚಾನ್ಪೊ ಯಿಂಗ್ ನ್ಯಾಯಾಲಯದ ಹೊರಗೆ ಸುದ್ಧಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

   ಶಿಕ್ಷೆಗೆ ಗುರಿಯಾದವರಲ್ಲಿ 6 ಮಂದಿ ಈಗಾಗಲೇ ಜೈಲಿನಲ್ಲಿದ್ದು ಇವರು ವಿಚಾರಣೆ ಸಂದರ್ಭ ಕಳೆದ ಜೈಲು ವಾಸದ ಅವಧಿಯನ್ನು ಶಿಕ್ಷಾವಧಿ ಎಂದು ಪರಿಗಣಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಈ ಹಿಂದೆ ಬ್ರಿಟನ್ ನ ವಸಾಹತು ಆಗಿದ್ದ ಹಾಂಕಾಂಗ್ ಅನ್ನು 1997ರಲ್ಲಿ ಚೀನಾದ ಆಡಳಿತಕ್ಕೆ ಒಪ್ಪಿಸಲಾಗಿತ್ತು. ಚೀನಾವು ಹಾಂಕಾಂಗ್ ನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ ಎಂಬ ಕಠಿಣ ನಿಯಮವನ್ನು ಜಾರಿಗೊಳಿಸಿದ್ದನ್ನು ವಿರೋಧಿಸಿ ಅಲ್ಲಿ ಪ್ರತಿಭಟನೆ ನಡೆದಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News