ಅಕ್ರಮ ದೂರು ಅರ್ಜಿ ಪರಿಶೀಲನೆ: ಪೆರ್ಡೂರು ಪಿಡಿಓಗೆ ನಿಂದಿಸಿ, ಬೆದರಿಕೆ

Update: 2021-09-01 16:54 GMT

ಹಿರಿಯಡ್ಕ, ಸೆ.1: ಹೆಬ್ರಿ ಮತ್ತು ಮುದ್ರಾಡಿ ಗ್ರಾಪಂನಲ್ಲಿ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸದಾಶಿವ ಸೆರ್ವೆಗಾರ ಎಂಬವರ ಅಕ್ರಮಕ್ಕೆ ಸಂಬಂಧಿಸಿದ ದೂರು ಅರ್ಜಿಯನ್ನು ಪರಿಶೀಲಿಸಿದ ಕಾರಣಕ್ಕಾಗಿ ಪೆರ್ಡೂರು ಗ್ರಾಪಂ ಪಿಡಿಓ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಕೆ ಹಾಕಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆರ್ಡೂರು ಗ್ರಾಮದ ಸರ್ವೆ ನಂಬ್ರ 73/03ರಲ್ಲಿ 15 ಸೆನ್ಸ್ ಜಾಗದಲ್ಲಿ ಪಿಡಿಓ ಸದಾಶಿವ ಸೆರ್ವೆಗಾರರ ವಾಸ್ತವ್ಯದ ಮನೆ ಬಗ್ಗೆ ಪಂಚಾಯತ್ ಕಟ್ಟಡ ಪರವಾಣಿಗೆ ನಂಬ್ರ 27/2020-21 ಪಡೆದುಕೊಂಡಿದ್ದು ಈ ಜಾಗದಲ್ಲಿ ಮನೆ ನಿರ್ಮಾಣದ ಬದಲು ಸರಕಾರಿ ಜಾಗದಲ್ಲಿ ನಿರ್ಮಿಸುತ್ತಿದ್ದು, ಇದನ್ನು ನಿಲ್ಲಿಸುವಂತೆ ಪೆರ್ಡೂರಿನ ನವೀನ್ ದೂರು ಅರ್ಜಿಯನ್ನು ಗ್ರಾಪಂಗೆ ಸಲ್ಲಿಸಿದ್ದರು. ಅದರಂತೆ ಪೆರ್ಡೂರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುಮನ ಕೆ.(49) ಜು.31ರಂದು ಸ್ಥಳ ಪರೀಶೀಲನೆ ನಡೆಸಿ, ಸಮಜಾಯಿಸಿಕೆ ನೀಡುವಂತೆ ಆ.2ರಂದು ನೋಟೀಸ್ ನೀಡಿದ್ದರು. ಈ ಸ್ಥಳ ಪರೀಶಿಲನೆ ನಡೆಸಿದಕ್ಕಾಗಿ ಆರೋಪಿಗಳಾದ ಪೆರ್ಡೂರು ಹೊಸಂಗಡಿಯ ದೇವು ಪೂಜಾರಿ, ತುಕಾರಾಮ್ ನಾಯಕ್, ಜಗದೀಶ ಶೆಟ್ಟಿ, ಸಚಿನ್ ಪೂಜಾರಿ ಎಂಬವರು ಅಸಮಾಧಾನಗೊಂಡು ಪಿಡಿಓ ಸುಮನ ಕೆ. ಅವರೊಂದಿಗೆ ಅನುಚ್ಚಿತವಾಗಿ ವರ್ತಿಸಿ ಕಛೇರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ದೂರು ಅರ್ಜಿಗೆ ಸಂಬಂಧಿಸಿ ಯಾವುದೇ ವರದಿಯನ್ನು ಮೇಲಾಧಿಕಾರಿಯವರಿಗೆ ಸಲ್ಲಿಸದಂತೆ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಅಲ್ಲದೆ ದೇವು ಪೂಜಾರಿ, ಪಿಡಿಓಗೆ ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡುವ ಉದ್ದೇಶದಿಂದ ಮೇಲಾಧಿಕಾರಿಯವರಿಗೆ ಶಿಸ್ತು ಕ್ರಮ ನಡೆಸುವುದಕ್ಕಾಗಿ ಸುಳ್ಳು ಮಾಹಿತಿ ನೀಡಿದ್ದು ಆ.30ರಂದು ಪಿಡಿಓ ಸುಮನ ಅವರಿಗೆ ಅಗೌರವ ಆಗುವ ರೀತಿಯಲ್ಲಿ ‘ನೀನು ಈ ದಿವಸವೇ ನಿಮ್ಮ ಪ್ರಭಾರವನ್ನು ಹಸ್ತಾಂತರಿಸಿ ನಾಳೆಯ ಸಭೆಗೆ ಬರುವುದು ಬೇಡ’ ಎಂಬುದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News